ಜ್ಞಾನ ಸಂಪಾದನೆ ಮತ್ತು ಇತಿಹಾಸ ಪ್ರಜ್ಞೆ ರೂಢಿಸಿಕೊಳ್ಳಬೇಕಾದರೆ ಯುವಕರು ಹೆಚ್ಚೆಚ್ಚು ಓದಿ:ಡಾ. ಜೆ. ಎಸ್. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ವಿಜಯಪುರ, ಮಾ. 24:
ಇವತ್ತಿನ ಯುವ ಜನಾಂಗದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದ್ದು ಅತ್ಯಂತ ವಿಷಾದದ ಸಂಗತಿಯಾಗಿದೆ. ಜ್ಞಾನ ಸಂಪಾದನೆ ಮತ್ತು ಇತಿಹಾಸ ಪ್ರಜ್ಞೆ ರೂಢಿಸಿಕೊಳ್ಳಬೇಕಾದರೆ ಯುವಕರು ಹೆಚ್ಚು ಹೆಚ್ಚು ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ದಿನ ಡಾಟ್ ಕಾಮ್‌ನಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ ಎಂದು ಪ್ರಗತಿಪರ ಚಿಂತಕ ಡಾ. ಜೆ.ಎಸ್.ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೈ ಹಿಂದ್, ಜೈ ಕರ್ನಾಟಕ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚೆಗೆ ಮೊಬೈಲ್ ಬಳಕೆಯಿಂದ ಎಲ್ಲರಲ್ಲೂ ಓದುವ ಹವ್ಯಾಸ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ದಿನ ಡಾಟ್ ಕಾಮ್ ಇಂದಿನ ಪೀಳಿಗೆಗಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದೆ. ಎಲ್ಲರೂ ನೈಜ ಇತಿಹಾಸ ಅರಿಯುವ ಪ್ರಯತ್ನ ಮಾಡಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತಮ್ಮ ಜೀವ ತ್ಯಾಗ ಮಾಡಿದ್ದಾರೆ. ಅಂಥವರನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಹಲವಾರು ಜನರು ಎಲೆಮರೆಯ ಕಾಯಿಯಂತೆ ಶ್ರಮಿಸಿದ್ದಾರೆ. ಏಕೀಕರಣಕ್ಕಾಗಿ ಶ್ರಮಿಸಿದವರನ್ನು ಇತಿಹಾಸದಿಂದ ಮರೆಮಾಚುವ ಕೆಲಸವಾಗುತ್ತಿದೆ. ವಿದ್ಯಾರ್ಥಿನಿಯರು ಇಂತಹ ವಿಷಯಗಳ ಬಗ್ಗೆ ಜ್ಞಾನ ಹೊಂದಬೇಕು. ಭಾರತದ ಇತಿಹಾಸವನ್ನು ಹೆಕ್ಕಿ ತೆಗೆದು, ನೈಜ ಇತಿಹಾಸ ಓದಬೇಕು ಎಂದು ಸಲಹೆ ಮಾಡಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ವಿಭಿನ್ನ ವಿಚಾರಧಾರೆಗಳ ನಡುವೆ ಪ್ರಗತಿಶೀಲ ಚಿಂತನೆಗಳನ್ನು ಬಿತ್ತುವ ಕಾರ್ಯವನ್ನು ಈ ದಿನ ಡಾಟ್ ಕಾಮ್ ಮಾಡುತ್ತಿದೆ. ಜನಪರ ಧ್ವನಿಯಾಗಿ ಪತ್ರಿಕೆ ಕಾರ್ಯನಿರ್ವಹಿಸುತ್ತಿದ್ದು, ತೊಂದರೆಗೆ ಈಡಾದವರ ಸಮಸ್ಯೆಗಳನ್ನು ಮುನ್ನೆಲೆಗೆ ತರುವಲ್ಲಿ ಶ್ರಮ ವಹಿಸುತ್ತಿದೆ. ನಿರ್ಲಕ್ಷ್ಯಗೊಳಗಾದ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತಿದೆ. ಇಂದಿನ ಯುವಜನತೆ ಮೊಬೈಲ್ ದಾಸರಾಗಬಾರದು. ಪುಸ್ತಕಗಳನ್ನು ಓದಿ. ಪ್ರಸ್ತುತ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ನಾಯಕ, ಸಂಶೋಧನಾ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕರು, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಮತ್ತಿತರಿದ್ದರು.
ಬೆಂಗಳೂರಿನ ಈದಿನ. ಕಾಮ್‌ನ ಸೆಂಟ್ರಲ್ ಕೋ-ಆರ್ಡಿನೆಟರ್ ಸಂತೋಷ್ ಎಚ್. ಎಮ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ತಹಮೀನಾ ನಿಗಾರ ಸುಲ್ತಾನಾ ವಂದಿಸಿದರು, ಜಯಶ್ರೀ ತಳವಾರ ನಿರೂಪಿಸಿದರು.

Share this