ವಿಜಯಪುರದಲ್ಲಿ ಧಾರಾಕಾರ ಮಳೆ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 9:
ಜಿಲ್ಲೆಯಲ್ಲಿ ಮತ್ತೆ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದು ಜನರು ತೀವ್ರ ತೊಂದರೆ ಅನುಭವಿಸಿದ್ದರು. ಈ ಮಧ್ಯೆ ಒಂದು ದಿನ ಮಾತ್ರ ಮಳೆ ನಿಂತು ಜನರು ಸೂರ್ಯನ ಮುಖ ಕಂಡಿದ್ದರು.
ಶುಕ್ರವಾರ ಸಂಜೆ ನಗರ ಸೇರಿದಂತೆ ಮತ್ತೆ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದ್ದು, ಸತತ ಒಂದು ಗಂಟೆಗೂ ಹೆಚ್ಚು ಕಾಲ ನಗರದಲ್ಲಿ ಧಾರಾಕಾರ ಮಳೆ ಸುರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಸ್ಟೇಷನ್ ರಸ್ತೆ, ಶಾಪೇಟೆ, ರಾಮ ನಗರ, ಫಿರದೋಸ್ ನಗರ, ಗಣೇಶ ನಗರ, ಲಕ್ಷ್ಮಣ ನಗರ ಹಾಗೂ ಇತರೆ ಪ್ರದೇಶಗಳಲ್ಲಿ‌ ಮಳೆ‌‌ ನೀರಿನ ಅಬ್ಬರ ಹೆಚ್ಚಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ.
ತಗ್ಗು ಪ್ರದೇಶದ ಮನೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಮನೆಗಳಲ್ಲಿದ್ದ ಪಡಿತರ ದಿನಸಿ ಹಾಗೂ ಇತರೆ ವಸ್ತುಗಳು ಮಳೆ‌‌ ನೀರು ಪಾಲಾಗಿವೆ.
ಮನೆಗಳಿಗೆ ಹೊಕ್ಕ ನೀರು ಹೊರ ಹಾಕಲು ಜನರು ಹರ ಸಾಹಸ ಮಾಡಬೇಕಾಯಿತು. ಜನರಿಗೆ ರಾತ್ರಿ ನಿದ್ರೆ ಇಲ್ಲದೆ ಜಾಗರಣೆ ಮಾಡುವಂತಾಯಿತು. ಜನ ಜೀವನ ಅಸ್ತವ್ಯಸ್ತವಾಗಿ ಜನರು ಗೋಳಿಡುವಂತಾಯಿತು.
ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಡೋಣಿ ನದಿ ತೀರದಲ್ಲಿ ಪ್ರವಾಹದ ಆತಂಕ ಹೆಚ್ಚಿದೆ. ಈಗಾಗಲೇ ಡೋಣಿ‌ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದು ಕೆಲ ಸೇತುವೆಗಳು ಜಲಾವೃತಗೊಂಡಿವೆ.
ಮೋಡ ಕವಿದ ವಾತಾವರಣವಿದ್ದು, ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ.

Share this