ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 1: ಭಾರತೀಯ ಸಂಸ್ಕೃತಿ ಅತ್ಯಂತ ಅಮೋಘವಾದದ್ದು, ಶ್ರೇಷ್ಠ ಸಂಸ್ಕೃತಿಯನ್ನು ಒಳಗೊಂಡ ಭಾರತ ದೇಶ ವಿಶ್ವಕ್ಕೆ ಮಾದರಿಯಾಗಿದೆ. ಆಧ್ಯಾತ್ಮಿಕತೆ, ಧಾರ್ಮಿಕತೆ, ವೈಜ್ಞಾನಿಕತೆ, ಕಲೆ, ಸಾಹಿತ್ಯ, ಸಂಪ್ರದಾಯದ ಆಚರಣೆಗಳಲ್ಲಿ ಭಾರತ ದೇಶ ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿದೆ. ದೇಶಿಯ ಬಣ್ಣ ಬಣ್ಣದ ಉಡುಗೆ, ತೊಡುಗೆಯನ್ನು ಧರಿಸಿಕೊಂಡು ಆಚರಿಸುವ ಸಾಂಪ್ರದಾಯಿಕ ಹಬ್ಬ. ಪ್ರತಿಯೊಬ್ಬರಲ್ಲಿ ಉಲ್ಲಾಸವನ್ನು ತರುತ್ತದೆ ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.
ಭಾನುವಾರ ನಗರದ ಚೇತನಾ ಸಂಸ್ಥೆಯ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಚರಿಸಿದ ಸಾಂಪ್ರದಾಯಿಕ ದಿನಾಚರಣೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಜಗತ್ತನ್ನೇ ಗೆಲ್ಲಬಹುದು ಸತತವಾದ ಅಧ್ಯಯನ ನಿಮ್ಮನ್ನ ಅತ್ಯುನ್ನತ ಸ್ಥಾನಕ್ಕೆ ಒಯ್ಯುತ್ತದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಸಾಹಿತಿ,ಪ್ರೊ. ಎ. ಎಚ್. ಕೊಳಮಲಿ ಮಾತನಾಡಿ ಸಾಂಪ್ರದಾಯಿಕ ದಿನದ ಆಚರಣೆಯಿಂದ ದೇಶದ ಪರಂಪರೆ ಸಂಸ್ಕೃತಿ ಉಳಿಯುತ್ತದೆ ಜತೆಗೆ ಯುವಕರಿಗೆ ದೇಶದ ಪರಂಪರೆಯ ಅರಿವು ಮೂಡುತ್ತದೆ.ಎಂದು ಹೇಳಿದ ಅವರು ಓದುವಿಗೆ ಜಗತ್ತನ್ನ ಗೆಲ್ಲುವ ಶಕ್ತಿ ಇದೆ ಮನಸ್ಸು ಕೊಟ್ಟು ಅಧ್ಯಯನ ಮಾಡಿ ಪಾಲಕ, ಪೋಷಕ, ಶಿಕ್ಷಕರ ಮನಸ್ಸನ್ನು ಗೆದ್ದು ಒಳ್ಳೆಯ ಸಾಧಕರಾಗಿ ಸುಂದರವಾದ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು
ವಿದ್ಯಾರ್ಥಿಗಳು ಬಗೆ ಬಗೆಯ ಬಣ್ಣದ ಉಡುಪನ್ನು ಧರಿಸಿ ನೃತ್ಯ, ಜಾನಪದ ಕಲೆ, ಗಾಯನದ ಮೂಲಕ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು.
ಇದೇ ಸಂದರ್ಭದಲ್ಲಿ ದೀಪಾದಾನ ಸಮಾರಂಭ ಮಾಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ, ನಾಗರಾಜ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ ಕುಲಕರ್ಣಿ,ಸಿ ಎಸ್ ವಾಲಿ,ಸಾಗರ ಕುಲಕರ್ಣಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕುಮಾರ ಶ್ರೇಯಾ ಪತ್ತಾರ ಸ್ವಾಗತಿಸಿ, ನಿರೂಪಿಸಿದರು.
ಸಾಂಪ್ರದಾಯಿಕ ಹಬ್ಬಗಳು ಮನಸ್ಸಿಗೆ ಉಲ್ಲಾಸ ತರುತ್ತವೆ- ರಾಜಶ್ರೀ ಜುಗತಿ


