ಸಪ್ತಸಾಗರ ವಾರ್ತೆ, ವಿಜಯಪುರ,ಆ.೧೨:
ಪ್ರಾಥಮಿಕ ಶಾಲಾ ಶಿಕ್ಷಕರ “ವೃಂದ ಮತ್ತು ನೇಮಕಾತಿ ನಿಯಮ” ಬದಲಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಶಿಕ್ಷಕ ಸಮೂಹ ಹಾಗೂ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೇರಿ ಹಕ್ಕೋತ್ತಾಯದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಲಮಾಣಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ “ವೃಂದ ಮತ್ತು ನೇಮಕಾತಿ ನಿಯಮ” ಬದಲಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗುತ್ತಿದ್ದು, ಕಳೆದ ವರ್ಷ ಮುಖ್ಯಮಂತ್ರಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದೆAದು ಭರವಸೆ ನೀಡಿದ್ದರು. ಆದರೂ ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಡೆಸಲಾಗುವುದು. ಸಾಧ್ಯವಾದರೆ ತರಗತಿ ಬಹಿಷ್ಕಾರ ಮಾಡಿಯೂ ನಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದು. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ತಕ್ಷಣವೇ ನಮ್ಮ ಬೇಡಿಕೆÀಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಜಿಓಸಿಸಿ ಬ್ಯಾಂಕಿನ ನಿದೇರ್ಶಕ ಹನಮಂತ ಕೊಣದಿ, ಸೈಯ್ಯದಜುಬೇರ ಕೆರೂರ ಮಾತನಾಡಿ, ಸರ್ಕಾರ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಮೀನ ಮೇಷ ಎಣಿಸುತ್ತಿದೆ. ೨೦೧೬ಕ್ಕಿಂತ ಮುಂಚೆ ನೇಮಕವಾದವರಿಗೆ ಅನ್ಯಾಯ ಮಾಡುತ್ತಿದೆ. ತಕ್ಷಣವೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ನಂತರ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶಿಕ್ಷಕರ ಸಂಘದ ಪ್ರಧಾನಕಾರ್ಯದರ್ಶಿ ಅಲ್ಲಾಬಕ್ಷ ವಾಲೀಕಾರ, ಶಿಕ್ಷಕರ ಸಂಘಟನೆ ಪ್ರಮುಖರಾದ ಮಲಕಪ್ಪ ಟಕ್ಕಳಕಿ, ನಿರ್ದೇಶಕರಾದ ಅಶೋಕ ಚನಬಸುಗೋಳ, ಗೀತಾ ಹತ್ತಿ, ಡಿ.ಡಿ. ಅಂಕಲಗಿ, ಬಿ.ಎಸ್. ಮಠ, ಎ.ಬಿ. ದಢಕೆ, ಕಬೂಲ್ ಕೊಕಟನೂರ, ಎಸ್.ಎನ್. ಗಗನಮಾಲಿ, ಅಶೋಕ ಬೂದಿಹಾಳ, ವೀರಭದ್ರಪ್ಪ, ಅಜೀಜ ಅರಳಿಮಟ್ಟಿ, ಸಲೀಮ ದಡೇದ, ಎಂ.ಎ. ಮುಲ್ಲಾ, ಎಂ.ಎಸ್. ಮುಕರ್ತಿಹಾಳ, ವಾಯ್.ಟಿ. ಪಾಟೀಲ, ಎಂ.ಎ. ವಾಲಿಕಾರ, ಎಸ್.ವಿ. ಹರಳಯ್ಯ, ಪರಮಾನಂದ ಚಾಂದಕವಟೆ, ಆನಂದ ಕೆಂಭಾವಿ, ಜಯರಾಮ ಚವ್ಹಾಣ, ಎ.ಎಚ್. ವಾಲಿಕಾರ, ಎಸ್.ಎನ್. ಬಾಗಲಕೋಟ, ಎಮ್.ಎನ್. ನಾಯಿಕ, ವಿಜಕುಮಾರ ದೇಸಾಯಿ, ಸಿದ್ರಾಯ ಅಥಣಿ, ಅನೀಲ ಗೊಡೆಪ್ಪಗೋಳ, ವಿಜಯಲಕ್ಷಿ ದಿವಾನಜಿ ಸೇರಿದಂತೆ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
ಬೇಡಿಕೆ ಈಡೇರದಿದ್ದರೆ ತರಗತಿ ಬಹಿಷ್ಕಾರ: ಶಿಕ್ಷಕರ ಸಂಘದ ಎಚ್ಚರಿಕೆ
