ಜ. 9ರಂದು ಚೆನ್ನಮ್ಮ ಮೂರ್ತಿ ಅನಾವರಣ: ಜಂಬಗಿ (ಆ)ಯಿಂದ ವೀರ ಜ್ಯೋತಿ ಯಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 5: ಜ.9ರಂದು ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮಳ ಮೂರ್ತಿ ಅನಾವರಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೆರವೇರಿಸಲಿದ್ದು, ಈ ಹಿನ್ನೆಲೆಯಲ್ಲಿ, ಜ. 9ರಂದು ಬೆಳಗ್ಗೆ 7 ಗಂಟೆಗೆ ಜಂಬಗಿ (ಆ) ಹಾಗೂ ಕೊಟ್ನಾಳದಿಂದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬಹಾದ್ದೂರ ಬಸಲಿಂಗಪ್ಪ ದೇಶಮುಖ ಅವರ ವೀರ ಜ್ಯೋತಿ ಯಾತ್ರೆ ಹೊರಡಲಿದೆ ಎಂದು ಪಂಚಮಸಾಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾರಾಣಿ ತುಂಗಳ ಅವರು ತಿಳಿಸಿದರು.
ಸೋಮವಾರ ತಾಲೂಕಿನ ಜಂಬಗಿ (ಆ) ಗ್ರಾಮದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜ್ಯೋತಿ ಯಾತ್ರೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ ತಲುಪಿದ ಬಳಿಕ ಅಲ್ಲಿಂದ 2500ಕ್ಕೂ ಅಧಿಕ ಮಹಿಳೆಯರಿಂದ ಪೂರ್ಣಕುಂಭ ಮೇಳ ನಡೆಯಲಿದೆ. ಪೂರ್ಣಕುಂಭ ಮೇಳವು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ, ಬಸವೇಶ್ವರ ಸರ್ಕಲ್ ಮೂಲಕ ಕೇಂದ್ರ ಬಸ್ ನಿಲ್ದಾಣ ತಲುಪಲಿದೆ ಎಂದರು. ಅಲ್ಲದೇ, ನಗರದ ಕೇಂದ್ರ ಬಸ್ ನಿಲ್ದಾಣ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣಗೊಂಡ ಹಿನ್ನಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇದೇ ವೇಳೆ ವಿಧ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉಸ್ತುವಾರಿ ಸಚಿವ ಎಂ.ಬಿ‌.ಪಾಟೀಲ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಮಾಜದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಇಡಲು ಶ್ರಮಿಸಿದ ಉಸ್ತುವಾರಿ ಸಚಿವ ಎಂ.ಬಿ‌. ಪಾಟೀಲರಿಗೆ ಸಮಸ್ತ ಸಮಾಜ ಬಾಂಧವರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ದೇಶಮುಖ ಮನೆತನದ ಸಂಗರಾಜ ದೇಶಮುಖ ಮಾತನಾಡಿ, ಜ.9ರಂದು ಬೆಳಗ್ಗೆ 7ಕ್ಕೆ ಜಂಬಗಿ (ಆ) ಗ್ರಾಮದಿಂದ ಕುದುರೆಯೊಂದಿಗೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ವರೆಗೆ ವೀರ ಜ್ಯೋತಿ ಯಾತ್ರೆ ಹೊರಡಲಿದೆ. ಬಳಿಕ ಅಲ್ಲಿಂದ ನಗರದ ಕೇಂದ್ರ ಬಸ್ ನಿಲ್ದಾಣದ ವರೆಗೆ ಕುಂಭಮೇಳ ಹೊರಡಲಿದೆ ಎಂದರು. ಕಿತ್ತೂರು ರಾಣಿ ಚೆನ್ನಮ್ಮನ ತಾಯಿ ಪದ್ಮಾವತಿಯವರ ತವರುಮನೆ ಜಂಬಗಿ ಗ್ರಾಮದ ದೇಶಮುಖ ಮನೆತನವಾಗಿದೆ. ಈ ದೇಶಮುಖ ಮನೆತನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಂಬಗಿ(ಆ)ಯಲ್ಲಿ ಜನಿಸಿದರು. ಅವರ ಅಜ್ಜನಾದ ಬಹಾದ್ದೂರ ಬಸಲಿಂಗಪ್ಪ ದೇಶಮುಖರು 1858ರ ಪ್ರಥಮ ಸ್ವಾಂತಂತ್ರ್ಯ ವೀರ ಸೇನಾನಿಯಾಗಿದ್ದಾರೆ. ಬ್ರಿಟಿಷರು ಅವರನ್ನು ಬಂಧಿಸಿದ್ದ ವೇಳೆ ನೀವು ಹೋರಾಟದಿಂದ ಹಿಂದೆ ಸರಿದರೆ ದೇಶಮುಖ‌ ಮನೆತನದ ಆಡಳಿತದಲ್ಲಿದ್ದ 40 ಹಳ್ಳಿಗಳ ಸುಮಾರು 12 ಸಾವಿರ ಎಕರೆ ಜಮೀನನ್ನು ವಾಪಸ್ಸು ಕೊಡುತ್ತೇವೆ ಎಂದರೂ ಕೂಡಾ ಬಹಾದ್ದೂರ ಬಸಲಿಂಗಪ್ಪ ದೇಶಮುಖರು ಒಪ್ಪಿರಲಿಲ್ಲ. ಹಾಗಾಗಿ ಅವರಿಗೆ ಮೂರು ತಿಂಗಳು ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಲಾಯಿತು ಎಂದು ವೀರ ಮನೆತನದ ಇತಿಹಾಸ ತಿಳಿಸಿದರು.
ಸಮಾಜದ ಮುಖಂಡರಾದ ಗೀತಾ ಅಂಗಡಿ, ಪ್ರೀತಿ ಸೊನ್ನದ, ಸಾವಿತ್ರಿ ಅಲಗೊಂಡ, ಶ್ರೀಮಂತರಾವ ದೇಶಮುಖ, ಸಂಗರಾಜ ದೇಶಮುಖ, ಮಹಾಂತರಾವ ದೇಶಮುಖ, ರವಿಶಂಕರ ದೇಶಮುಖ, ಸಚಿನ ಗೆಜ್ಜಿ, ಗ್ರಾಮದ ಮಹಮ್ಮದ ಪೈಗಂಬರ ಮುಲ್ಲಾ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this