ಸಪ್ತಸಾಗರ ವಾರ್ತೆ, ವಿಜಯಪುರ, ಜು. 23:
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅನೇಕ ಸಂಘಟನೆಗಳ ನೇತೃತ್ವದಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಬುಧವಾರ ಮನವಿ ಸಲ್ಲಿಸಲಾಯಿತು.
ಪುಣೆ-ವಿಜಯಪುರದ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ, ಅಕ್ಕನ ಅರಿವು, ನೀಲಮ್ಮನ ಬಳಗ, ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ಇತರ ಬಸವಪರ ಸಂಘಟನೆಗಳ ಪ್ರಮುಖರು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಆನಂದ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುಣೆ-ವಿಜಯಪುರದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಿ ಹೆಚ್ಚಿನ ಆರ್ಥಿಕ ಅನುದಾನ ನೀಡಿ, ಶರಣ ಸಾಹಿತ್ಯದ ಸಂಶೋಧನೆ ಪರಿಷ್ಕರಣೆ ಪ್ರಕಟಣೆಗೆ ತ್ವರಿತವಾಗಿ ಕಾರ್ಯ ರೂಪಿಸಬೇಕು. ಅಲ್ಲದೇ ಮಹಿಳಾ ವಿವಿ ಆವರಣದಲ್ಲಿ ಈಗಿರುವ ವೀರಾಗಿಣಿ ಅಕ್ಕಮಹಾದೇವಿ ಅರೆಬೆತ್ತಲೆ ಪುತ್ಥಳಿಯನ್ನು ಕೂಡಲೇ ತೆರುವುಗೊಳಿಸಿ ಆ ಸ್ಥಳದಲ್ಲಿ ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕಮಹಾದೇವಿ ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಡಾ.ಪಟ್ಟಣ ಆಗ್ರಹಿಸಿದರು.
ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಡಾ. ಎಂ.ಎಂ.ಪಡಶೆಟ್ಟಿ (ಸಿಂದಗಿ) ಮಾತನಾಡಿ, ಜಗತ್ತಿನ ದಾರ್ಶನಿಕ ಜಗಜ್ಯೋತಿ ಬಸವಣ್ಣನವರು ವಿಜಯಪುರ ಜಿಲ್ಲೆಯಲ್ಲಿ ಜನಿಸಿದ್ದರೂ ಸಹಿತ ಜಿಲ್ಲೆಯ ಬಹುತೇಕ ಶರಣರ ಸ್ಮಾರಕಗಳು ನಿರ್ಲಕ್ಷಕ್ಕೆ ಒಳಪಟ್ಟಿವೆ. ಅವುಗಳ ರಕ್ಷಣೆಗೆ ಸರಕಾರ ಮುಂದಾಗಬೇಕು. ನಗರ ಹಾಗೂ ತಾಲೂಕು ಕೇಂದ್ರಗಳ ಪ್ರಮುಖ ಬೀದಿಗಳಿಗೆ ಮತ್ತು ವೃತ್ತಗಳಿಗೆ ಜಿಲ್ಲೆಯ ಶರಣರಾದ ಹಡಪದ ಅಪ್ಪಣ್ಣ, ಅಕ್ಕ ನಾಗಮ್ಮ, ನುಲಿಯ ಚಂದಯ್ಯ ಹಾವಿನಾಳ ಕಲ್ಲಯ್ಯ, ಚೆನ್ನ ಬಸವಣ್ಣ, ಮಡಿವಾಳ ಮಾಚಿದೇವ, ಚೆನ್ನ ಬಸವಣ್ಣ, ಕುರುಬ ಗೊಲ್ಲಾಳ ಸೇರಿದಂತೆ ಎಲ್ಲ ಶರಣರ ಹೆಸರಿಡಬೇಕೆಂದು ಒತ್ತಾಯಿಸಿದರು.
ಬಸವ ಜನ್ಮಸ್ಥಳವಾದ ವಿಜಯಪುರಕ್ಕೆ ಬಸವ ಜಿಲ್ಲೆಯೆಂದು ಮರುನಾಮಕರಣ ಮಾಡಬೇಕು. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಬಸ್ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ವಿ.ಸಿ.ನಾಗಠಾಣ, ಡಾ.ಸರಸ್ವತಿ ಪಾಟೀಲ, ಶರಣೆ ವಿಜಯಮಹಾಂತಮ್ಮ, ಬಸವರಾಜ ಕೋರಿ, ಪ್ರೊ. ಆರ್.ಎಸ್. ಬಿರಾದಾರ, ನಳಿನಿ ಮಹಾಗಾಂವಕರ, ಸಾಹಿತಿ ಸುಧಾ ಪಾಟೀಲ, ಶಾಂತಕ್ಕ ಧುಲಂಗೆ, ರೇಣುಕಾ ಬಾಗಲಕೋಟೆ, ಉದಯರಶ್ಮಿ ದಿನಪತ್ರಿಕೆ ಪ್ರಕಾಶಕಿ ಶೈಲಾ ಮಣೂರ ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಸಹಸ್ರಾರು ಸಂಖ್ಯೆಯಲ್ಲಿ ಬಸವ ಭಕ್ತರೊಡಗೂಡಿ ಉಗ್ರ ಪ್ರತಿಭಟನೆ ಮತ್ತು ಹೋರಾಟ ಕೈಗೊಳ್ಳಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಈ ವೇಳೆ ಪ್ರೊ. ಬಿ.ಎಸ್.ಹಣಮಶೆಟ್ಟಿ, ಶಿವಪ್ಪ ಗೌಸಾನಿ, ಶಿವಾನಂದ ಕೋರಿ, ರತ್ನಾಬಾಯಿ ಬಿರಾದಾರ, ಸಾಹಿತಿ ಜಂಬುನಾಥ ಕಂಚಾಣಿ, ಸಿದ್ದಪ್ಪ ಪಡನಾಡ, ಬಸಮ್ಮ ಭರಮಶೆಟ್ಟಿ, ಡಾ.ಶಾರದಾಮಣಿ ಹುನಶಾಳ, ಪ್ರೊ ಆರ್.ಎಸ್ ಬಿರಾದಾರ, ರೇಣುಕಾ ಪಾಟೀಲ, ಬಸವರಾಜ ಕೋರಿ
ಮಹಾದೇವಿ ಕಿಣಗಿ, ಗೌರಮ್ಮ ನಾಶಿ, ಸಂಗಮೇಶ ಕಲಹಾಳ, ಭಾಗ್ಯ ಕೋಟಿ, ಬೊರಮ್ಮ ರಾಂಪೂರ, ಡಾ.ಹನುಮಾಕ್ಷಿ ಗೋಗಿ, ರೇಣುಕಾ ಬಾಗಲಕೋಟ, ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರಿದ್ದರು.
ಮಹಿಳಾ ವಿವಿ ಕುಲಪತಿಗಳಿಗೆ ಮನವಿ
ಬಳಿಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ತೆರಳಿದ ಹೋರಾಟಗಾರರು ಮಹಿಳಾ ವಿವಿ ಕುಲಪತಿಗಳ ಪರವಾಗಿ ಕನ್ನಡ ವಿಭಾಗದ ಮುಖ್ಯಸ್ಥ ಮಹೇಶ ಚಿಂತಾಮಣಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಪ್ರೊ.ರಾಜಶೇಖರ ಪಾಟೀಲ ಅವರಿಗೆ ಅಕ್ಕಮಹಾದೇವಿ ಮೂರ್ತಿ ಬದಲಿಸಲು ಮೂರು ತಿಂಗಳ ಗಡುವು ನೀಡಿ ಮನವಿ ಸಲ್ಲಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಸವಪರ ಸಂಘಟನೆಗಳ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.