ಸಪ್ತಸಾಗರ ವಾರ್ತೆ ವಿಜಯಪುರ, ಆ. 28 :
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೨೫.೧೮ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಬ್ಯಾಂಕು ಗಳಿಸಿರುವ ನಿವ್ವಳ ಲಾಭದ ಪ್ರಮಾಣ ಬ್ಯಾಂಕಿನ ಇತಿಹಾಸದಲ್ಲಿಯೇ ಗರಿಷ್ಠವಾಗಿದ್ದು, ವಾಸ್ತವವಾಗಿ ಬ್ಯಾಂಕು ೩೩.೭೧ ಕೋಟಿ ರೂ. ಲಾಭ ಗಳಿಸಿದ್ದು, ಅದರಲ್ಲಿ ೮.೫೩ ಕೋಟಿ ರೂ. ತೆರಿಗೆ ಪಾವತಿ ಮಾಡುವ ಮೂಲಕ ೨೫.೧೮ ಕೋಟಿ ರೂ. ನಿವ್ವಳ ಲಾಭ ಗಳಿಸಿದಂತಾಗಿದೆ ಎಂದರು.
ಬ್ಯಾಂಕು ೧೮೫.೪೦ ಕೋಟಿ ರೂ. ಷೇರು, ೪೧೨.೩೬ ಕೋಟಿ ರೂ. ನಿಧಿಗಳು, ೩೮೧೪.೧೬ ಕೋಟಿ ರೂ. ಠೇವು, ೪೯೦೧ ಕೋಟಿ ರೂ. ದುಡಿಯುವ ಬಂಡವಾಳ, ೧೬೮ ಕೋಟಿ ರೂ. ಸಾಲದ ಬಾಕಿ ಹೊಂದಿದೆ ಎಂದು ವಿವರಿಸಿದರು.
ಸ್ವಂತ ಬಂಡವಾಳ ಪ್ರಮಾಣದಲ್ಲಿಯೂ ಏರಿಕೆಯಾಗಿದ್ದು, ಕಳೆದ ವರ್ಷ ೫೪೦ ಕೋಟಿ ರೂ. ಇದ್ದ ಸ್ವಂತ ಬಂಡವಾಳ ಪ್ರಸಕ್ತ ವರ್ಷದಲ್ಲಿ ೫೯೮ ಕೋಟಿ ರೂ.ಗೆ ಏರಿಕೆಯಾಗಿದ್ದು, ಠೇವಣಿ ಪ್ರಮಾಣ ೩೪೯೫ ಕೋಟಿ ರೂ.ಗಳಿಂದ ೩೮೧೪ ಕೋಟಿ ರೂ.ಗಳಷ್ಟು ಏರಿಕೆ, ದುಡಿಯುವ ಬಂಡವಾಳ ಪ್ರಮಾಣ ೪೭೦೧ ಕೋಟಿ ರೂ.ಗಳಿಂದ ೪೯೦೨ ಕೋಟಿ ರೂ ಅಂದರೆ ೨೦೧ ಕೋಟಿ ರೂ. ಏರಿಕೆಯಾಗಿದೆ ತಿಳಿಸಿದರು.
ಕೃಷಿ ಚಟುವಟಿಕೆಗಳಿಗಾಗಿ ೧೮೬೪ ಕೋಟಿ ರೂ. ಕೃಷಿಯೇತರ ಸಾಲವಾಗಿ ೧೧೦೬ ಕೋಟಿ ರೂ. ಸೇರಿದಂತೆ ಒಟ್ಟು ೨೯೭೦ ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
೧೨೩೩ ಕೋಟಿ ರೂ,.ಗಳ ಹೆಚ್ಚುವರಿ ಸಂಪನ್ಮೂಲವನ್ನು ಶಾಸನಬದ್ಧ ಹಾಗೂ ಇತರ ಬ್ಯಾಂಕುಗಳಲ್ಲಿ ಲಾಭದಾಯಕವಾಗಿ ಹೂಡಿಕೆ ಮಾಡಲಾಗಿದೆ. ಕಳೆದ ವರ್ಷ ೬೬೦೭ ಕೋಟಿ ರೂ. ವಹಿವಾಟು ನಡೆಸಿದ್ದು ಬ್ಯಾಂಕು ಈ ವರ್ಷ ೭೦೯೫ ಕೋಟಿ ರೂ. ವಹಿವಾಟು ಮಾಡಿದ್ದು, ವಹಿವಾಟು ಪ್ರಮಾಣದಲ್ಲಿ ೪೮೮ ಕೋಟಿ ರೂ. ಏರಿಕೆಯಾಗಿದೆ ಎಂದರು.
೧೯೯೭ ರಿಂದ ಇಲ್ಲಿಯವರೆಗೆ ವಿಭಜನೆ ಪೂರ್ವದಲ್ಲಿ ೩೩.೨೬ ಕೋಟಿ ರೂ. ಲಾಭ ಗಳಿಸಿದ್ದರೆ ವಿಭಜನೆ ನಂತರ ೨೦೦೩ ರಿಂದ ೨೦೨೫ ರವರೆಗೆ ಒಟ್ಟು ೨೦೦.೪೨ ಕೋಟಿ ರೂ. ಸೇರಿದಂತೆ ಒಟ್ಟು ೨೩೩.೬೮ ಕೋಟಿ ರೂ. ಲಾಭ ಗಳಿಸಿದೆ ಎಂದರು.
ಈ ಹಿಂದೆ ನಬಾರ್ಡ್ ಶೇ.೬೦ ರಷ್ಟು ಪುನರ್ಧನ ನೀಡುತ್ತಿತ್ತು. ಇದು ರೈತರಿಗೆ ವರದಾನವೂ ಆಗಿತ್ತು. ಈ ಪ್ರಮಾಣ ಶೇ.೫೦, ನಂತರ ಶೇ.೪೦ ಕ್ಕೆ ಇಳಿಕೆಯಾಗಿ ಈಗ ಕೇವಲ ಶೇ.೧೩ ಕ್ಕೆ ಸೀಮಿತಗೊಂಡಿದೆ. ಹೀಗಾಗಿ ಈ ಪುನರ್ಧನ ಪ್ರಮಾಣ ಏರಿಕೆಗಾಗಿ ರಾಜ್ಯದ ಎಲ್ಲ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಸುರೇಶ ಬಿರಾದಾರ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಕೆ. ಭಾಗ್ಯಶ್ರೀ, ಆಡಳಿತ ಮಂಡಳಿ ಸಲಹೆಗಾರ ಜೆ. ಕೋಟ್ರೇಶಿ, ಸಿಇಓ ಎಸ್.ಎ. ಢವಳಗಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವಿಡಿಸಿಸಿ ಬ್ಯಾಂಕ್ ಗೆ ೨೫.೧೮ ಕೋಟಿ ರೂ. ನಿವ್ವಳ ಲಾಭ
