ಶಿಕ್ಷಣ ರಂಗದ ದಿಗ್ಗಜ ಡಾ. ಎಸ್.ಎ.ಪುಣೇಕರ ಇನ್ನಿಲ್ಲ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 13: ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ತಜ್ಞ, ಸಾಮಾಜಿಕ ಚಿಂತಕ, ಐತಿಹಾಸಿಕ ಕಳಕಳಿಯ ಮನೋಭಾವ ಹೊಂದಿದ ಡಾ. ಎಸ್.ಎ.ಪುಣೇಕರ ಮಂಗಳವಾರ ಮಧ್ಯಾಹ್ನ 1-30 ಗಂಟೆಗೆ ವಯೋ ಸಹಜತೆಯಿಂದ ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸು ಆಗಿತ್ತು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಅವರ ಪಾತ್ರ ಗಮನರ್ಹವಾಗಿದೆ. ಶರಣರ, ಸೂಫಿಗಳ ನಾಡು ವಿಜಯಪುರದಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹೆಮ್ಮರವಾಗಿ ಬೆಳೆಸಿದ ಕೀರ್ತಿ ಶಮಸುದ್ದೀನ್ ಅಬ್ದುಲ್ಲಾ ಪುಣೇಕರ ಅವರದು. ಈ ನಾಡಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪುಣೇಕರ 10 ಜನವರಿ 1936 ರಂದು ವಿಜಯಪುರದಲ್ಲಿ ಶ್ರೀ ಅಬ್ದುಲ್ಲಾ ಹಾಗೂ ಸೈಯಿದಾಮೈಬೂಬಿ ಪುಣ್ಯದಂಪತಿಗಳ ಹೆಮ್ಮೆಯ ಸುಪುತ್ರರಾಗಿ ಜನಿಸಿದರು. ಬಾಲ್ಯದಿಂದಲೇ ಪ್ರತಿಭಾನ್ವಿತರಾದ ಅವರು ಮಹಾರಾಷ್ಟ್ರದ ಪುಣೆಯಲ್ಲಿ ಸಿವ್ಹಿಲ್ ಇಂಜಿನಿಯರಿಂಗ್ ತಾಂತ್ರಿಕ ಪದವಿಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದರು. ಮುಂಬೈ ಮಹಾನಗರ ಪಾಲಿಕೆಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದರು. (1957-1962) ನಂತರ ಮಧ್ಯಪ್ರದೇಶದಲ್ಲಿ ಭಿಲಾಹಿ ಸ್ಟೀಲ್ ಪ್ಲಾಂಟ್‌ದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಾ ಹೆಸರು ಮಾಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳು ಶಿಕ್ಷಣ ತಜ್ಞರಾದ ಇವರ ಮನದಲ್ಲಿ ಸ್ವತಂತ್ರ ಭಾರತಕ್ಕಾಗಿ ಏನಾದರು ಸೇವೆ ಸಲ್ಲಿಸಬೇಕೆಂಬ ಕನಸು ವಿದ್ಯಾಭ್ಯಾಸ ಮಾಡುವಾಗ ಗಳೆಯರ ಗುಂಪಿನಲ್ಲಿ ಚರ್ಚೆ ಮಾಡಿರುವುದನ್ನು ನೆನೆಸಿಕೊಂಡರು. ಗೌರವಾನ್ವಿತರು ಮುಂದೆ ಜನ್ಮಭೂಮಿ ವಿಜಯಪುರಕ್ಕೆ ಶೈಕ್ಷಣಿಕ ರಂಗದಲ್ಲಿ ಸೇವೆ ಮಾಡಬೇಕೆದು ಸಂಕಲ್ಪ ಮಾಡಿದರು. ವಿಜಯಪುರದ ಶೈಕ್ಷಣಕ ಸ್ಥಿಗತಿಗಳನ್ನು ಬಲ್ಲವರಾದ ಅವರು ತಮ್ಮಕನಸುಗಳನ್ನು ವಿಜಯಪುರಕ್ಕೆ ಆಗಮಿಸಿ 1969ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಅಂದು ನೆಟ್ಟ ಶೈಕ್ಷಣಿಕ ಸಂಸ್ಥೆಯ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರಳಾಗಿದೆ.
“ಜನನಿ ಜನ್ಮ ಭೂಮಿಸ್ಟೆ ಸ್ವರ್ಗಾದಪಿ ಗರೀಯಿಸಿ” ಎನ್ನುವ ಮಾತನ್ನು ಅಭಿಮಾನದಿಂದ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಧೀಮಂತ ವ್ಯಕ್ತಿಗಳಾದ ಡಾ. ಪುಣೇಕರ ಅವರು ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ‘ಹೆಣ್ಣು ಮಕ್ಕಳ ಹೊಲಿಗೆ ತರಬೇತಿ ಕೇಂದ್ರ’ ವನ್ನು ಸ್ಥಾಪಿಸಿ ಸಾವಿರಾರು ಜನರ ಬಾಳಿಗೆ ಬೆಳಕಾಗಿದ್ದಾರೆ. ಜಾಗತಿಕ ಶೈಕ್ಷಣಿಕ ಚಿಂತನೆ ಮಾಡುವ ಇವರು ನೈತಿಕತೆ ಆಧಾರದ ಮೇಲೆ ಶಿಕ್ಷಣ ನೀಡಬೇಕೆಂಬ ಧ್ಯೇಯ ಹೊಂದಿದ್ದರು. ಮಹಿಳೆಯರ ಉನ್ನತ ಶಿಕ್ಷಣ ಪಡೆಯಬೇಕೆಂಬ ಮಹತ್ವಕಾಂಕ್ಷೆಯಿಂದ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಮಹಿಳಾ ಪದವಿ ಕಾಲೇಜು ಸ್ಥಾಪಿಸಿದ ಕೀರ್ತಿ ಇವರದಾಗಿದೆ.
ಸ್ವದೇಶದ ಅಥವಾ ವಿದೇಶಗಳ ಯಾವ ಆರ್ಥಿಕ ನೆರವನ್ನು ಪಡೆಯದ ಮಿತವ್ಯಯದ ಸೂತ್ರವನ್ನು ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ಅಳವಡಿಸಿ ಬೆಳಿಸಿದ್ದಾರೆ. ಇಂದು ಇದರ ಅಧೀನದಲ್ಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ರಾಜ್ಯಮಟ್ಟದ, ವಿಶ್ವವಿದ್ಯಾಲಯದ ಮಟ್ಟದ ರ‍್ಯಾಂಕಗಳನ್ನು ಗಳಿಸುವ ಮೂಲಕ ವಿದ್ಯಾಸಂಸ್ಥೆಯ ಘನತೆ ಹಾಗೂ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದನ್ನು ಕಂಡ ಪುಣೇಕರ ಸಂಭ್ರಮ ಪಟ್ಟು ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದ್ದಾರೆ. 28ಕ್ಕೂ ಅಧಿಕ ಶೈಕ್ಷಣಕಿಕ ಶಾಲಾ, ಕಾಲೇಜುಗಳು ಸಂಸ್ಥೆಯ ಅಡಿಯಲ್ಲಿ ಇರುವುದು ಇವರ ನಿರಂತರ ದುಡಿಮೆ. ಸಮಯ ಪರಿಪಾಲನೆ ಹಾಗೂ ಛಲ ಬಿಡದೆ ಸಾಧಿಸುವ ವ್ಯಕ್ತಿತ್ವದ ಪ್ರತೀಕವಾಗಿ ನಿಲ್ಲುತ್ತವೆ. ಅವರ ಕುರಿತು ನಾಡಿನ ಜನರಲ್ಲಿ ಅಭಿಮಾನಿ ಅರಳುವಂತೆ ಮಾಡುತ್ತವೆ.
ವಿಜಯಪುರ ನಾಡಿನಲ್ಲಿ ಬರ ಹಾಗೂ ಬಡತನ ಕಾಡುವುದನ್ನು ಮನಗಂಡ ಪುಣೇಕರ ಸುಲಭ ಬೆಲೆಯಲ್ಲಿ ಸಾಮಾನ್ಯರಿಗೂ ವಿಜಯಪುರ ನಗರದಲ್ಲಿ ನಿವೇಶನಗಳು ದೊರೆಯಬೇಕೆಂಬ ಉದ್ಧೇಶದಿಂದ “ಸರಕಾರಿ ಹಾಗೂ ಅರೆ ಸರಕಾರಿ ಗೃಹ ನಿರ್ಮಾಣ ಸಹಕಾರಿ ಸಂಘ ವಿಜಯಪುರ” ಸ್ಥಾಪಿಸಿ (1968) ಹಲವಾರು ಜನರ ಬೆಂಬಲ ಪಡೆದುಕೊಂಡು 800ಕ್ಕೂ ಅಧಿಕ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ನಿವೇಶನಗಳು ದೊರೆಯುವಂತೆ ಮಾಡಿದ್ದಾರೆ. ಅಲ್ಲಿ ಮನೆ ನಿರ್ಮಿಸಿಕೊಂಡ ಜನರು ‘ನಮಗೆ ನೆರಳಾದವರು’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಅಲ್ಲದೆ ವಿಜಯಪುರ ನಗರದ ಐತಿಹಾಸಿಕ ಸ್ಮಾರಕಗಳ ಕುರಿತು ಕಾಳಜಿ ಹೊಂದಿದ ಇವರು ಮುಂದಿನ ಪೀಳಿಗೆಗೆ ತಮ್ಮ ವೈಭವದ ಕಥೆಗಳನ್ನು ಅವು ಹೇಳಬೇಕು. ಹಾಳಾಗಬಾರದು ಎಂಬ ಧ್ಯೇಯ ಹೊಂದಿ ಅನೇಕ ಕಾರ್ಯಗಳನ್ನು ಮತ್ತು ಕಾರ್ಯಗಾರಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಶಮಸುದ್ದೀನ್ ಪುಣೇಕರ ಅವರ ಶೈಕ್ಷಣಿಕ, ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದ ಮೌಲಿಕ ಸೇವೆಗೆ ಸಂದಿದ ಪ್ರಶಸ್ತಿಗಳು ಹತ್ತು ಹಲವಾರು ಅಲಘರ್ ಮುಸ್ಲಿಂ ವಿಶ್ವವಿದ್ಯಾಲಯದ ಜೀವಮಾನ ಸಾಧನೆಗೆ ‘ಮೊಹಸೀನ-ಎ-ಮಿಲ್ಲತ್’ ಪ್ರಶಸ್ತಿ (2019), ಅಸೋಸಿಯನ್ ಆಫ್ ಮುಸ್ಲಿಂ ಪ್ರೊಫೆಶನಲ್ ಮುಂಬೈಎ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿ (2022), ಬಹುಮನಿ ಪ್ರತಿಷ್ಠಾನ ಕಲಬುರಗಿ, ಜೀವಮಾನ ಸಾಧನೆ ಪ್ರಶಸ್ತಿ (2023), ಗೆಸ್ಕೊ ಸಂಸ್ಥೆ ಸೋಲಾಪುರ ಕೊಡಮಾಡುವ ನಿಶಾನ-ಎ-ಗ್ರೇಸಿಯಸ್ ಪ್ರಶಸ್ತಿ (2024), ಹಾಗೂ ಶಾಹಿನ್ ಶಿಕ್ಷಣ ಸಂಸ್ಥೆ ಬೀದರ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿ (2024) ಮುಂತಾದವು ಇವರಿಗೆ ಸಂದಿದ್ದು ಗೌರವ ಘನತೆಯನ್ನು ಹೆಚ್ಚಿಸಿದೆ. ರಾಣಿ ಚೆನಮ್ಮ ವಿಶ್ವವಿದ್ಯಾಲನಿಲಯ ಕೂಡ ಅವರಿಗೆ ಇತ್ತೀಚಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.
ರಾಜ್ಯ ಬೃಹತ ಕೈಗಾರಿಕೆ ಸಚಿವರು ಹಾಗೂ ವಿಜಯಪುರ ಬೃಹತ್ ಕೈಗಾರಿಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಕಾನೂನು ಸಚಿವ ಎಚ್.ಕೆ.ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಸಚಿವ ಶಿವಾನಂದ ಪಾಟೀಲ, ಮುಖ್ಯ ಸಚೇತಕ ಸಲೀಮ ಅಹ್ಮದ, ಶಾಸಕ ಸುನೀಲಗೌಡ ಪಾಟೀಲ, ಜಿಲ್ಲೆಯ ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಶೋಕ ಮನಗೂಳಿ, ಅಪ್ಪಾಜಿ ನಾಡಗೌಡ, ವಿಠ್ಠಲ ಕಟಕದೊಂಡ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಹಾಂಸಿಪೀರ ದರ್ಗಾದ ಪೀಠಾಧಿಪತಿಗಳು, ಹಿರಿಯ ಧುರೀಣ ಅಬ್ದುಲ್ ಹಮೀದ ಮುಶ್ರೀಫ್, ಮಾಜಿ ಸಂಸದ ಐ.ಜಿ. ಸನದಿ, ನಗರ ಶಾಸಕ ಬಸನಗೌಡ ಪಾಟೀಲ, ವಿಜಯಪುರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕಾರ್ಪೊರೇಟರ ಅಶ್ಫಾಕ ಮನಗೂಳಿ, ಪ್ರೇಮಾನಂದ ಬಿರಾದಾರ, ಸಿದ್ದೇಶ್ವರ ಬ್ಯಾಂಕ್ ಅಧಕ್ಷ ಪ್ರಕಾಶ ಬಲಗಲಿ ಹಾಗೂ ನಿರ್ದೇಶಕರು, ಹಲವಾರು ಗಣ್ಯರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

Share this