ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅವರಿಗೆ ಪ್ರತಿಷ್ಠಿತ ಮಾತೋಶ್ರೀ ಶಂಕರಮ್ಮ ಪಿ. ಬಳಿಗಾರ ದತ್ತಿ ಪ್ರಶಸ್ತಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು.12: ಶಿಕ್ಷಣ, ಆಡಳಿತ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಮಾತೋಶ್ರೀ ಶಂಕರಮ್ಮ ಪಿ. ಬಳಿಗಾರ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಚಿವೆ ರಾಣಿ ಸತೀಶ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ. ಆರ್. ಸುನಂದಮ್ಮ, ಹಿರಿಯ ಲೇಖಕಿ ಡಾ. ವಸುಂಧರಾ ಭೂಪತಿ ಸೇರಿದಂತೆ ಗಣ್ಯರು ಪ್ರೊ. ವಿಜಯಾ ಕೋರಿಶೆಟ್ಟಿ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕಾವ್ಯ ವಿಭಾಗದಲ್ಲಿನ ಸಾಧನೆಗಾಗಿ ಮಾಧವಿ ಭಂಡಾರಿ ಹಾಗೂ ಗದ್ಯ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಬಿ.ಟಿ. ಜಾಹ್ನವಿ ಅವರಿಗೂ ಮಾತೋಶ್ರೀ ಶಂಕರಮ್ಮ ಪಿ. ಬಳಿಗಾರ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ವಿಜಯಾ ಕೋರಿಶೆಟ್ಟಿ, “ಈ ಪ್ರಶಸ್ತಿ ನನಗೆ ಹೊಸ ಜವಾಬ್ದಾರಿಯ ಆರಂಭವಾಗಿದೆ. ಶಿಕ್ಷಣ, ಸಂಶೋಧನೆ, ಸಾಹಿತ್ಯ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಸಂಕಲ್ಪವನ್ನು ಈ ವೇದಿಕೆಯಲ್ಲಿ ವ್ಯಕ್ತಪಡಿಸುತ್ತೇನೆ,” ಎಂದರು.
ಈ ಗೌರವವನ್ನು ತಮ್ಮ ಪಾಲಕರು, ಗುರುಗಳು, ಕುಟುಂಬದವರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ತಮ್ಮ ಶೈಕ್ಷಣಿಕ ಪಯಣಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಸಮರ್ಪಿಸುವುದಾಗಿ ತಿಳಿಸಿದ ಅವರು, ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೂ ಈ ಗೌರವವನ್ನು ಅರ್ಪಿಸಿದರು.
ಸಾಹಿತ್ಯವು ಸಮಾಜದ ಆತ್ಮವಾಗಿದ್ದು, ಸಮಾಜದ ನೋವು-ನಲಿವು, ಹೋರಾಟ, ಕನಸು ಹಾಗೂ ಆಶಯಗಳನ್ನು ದಾಖಲಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ ಎಂದು ಅವರು ಹೇಳಿದರು. ಮಹಿಳಾ ಸಾಹಿತ್ಯವು ಮಹಿಳೆಯರ ಅನುಭವಗಳಿಗೆ ಧ್ವನಿಯಾಗಿ ಸಮಾನತೆ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಲವು ವರ್ಷಗಳಿಂದ ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವ ಕರ್ನಾಟಕ ಲೇಖಕಿಯರ ಸಂಘದ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಸಮಾರಂಭದಲ್ಲಿ ಬಳಿಗಾರ ಕುಟುಂಬದ ಸದಸ್ಯೆ ಡಾ. ಮೇಘಾ ಸಿದ್ದಾರ್ಥ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Share this