ಬರದ ಬಿಗಿ ಮುಷ್ಟಿಗೆ ವಿಜಯಪುರ ರೈತ

ಶೇ.17ರಷ್ಟು ಮಾತ್ರ ಬಿತ್ತನೆ; ಪೈರು ಒಣಗುವ ಹಂತಕ್ಕೆ | ಗರಿಷ್ಠ ಪರಿಹಾರಕ್ಕೆ ವೈಜ್ಞಾನಿಕ ವರದಿ: ಎಂ.ಬಿ. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಆ.9: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ವಿಜಯಪುರ ಜಿಲ್ಲೆಯಲ್ಲಿ ಬರದ ಆತಂಕ ಗಂಭೀರವಾಗಿದ್ದು, ಬಿತ್ತನೆ ಮಾಡಿರುವ ಪೈರುಗಳು ಒಣಗುವ ಹಂತ ತಲುಪಿವೆ. ಜಿಲ್ಲೆಯಾದ್ಯಂತ ಈವರೆಗೆ ಕೇವಲ ಶೇ.17ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಬಿತ್ತನೆಯೇ ನಡೆದಿಲ್ಲ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಲಿದ್ದು, ಗರಿಷ್ಠ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಿಖರ ಹಾಗೂ ವೈಜ್ಞಾನಿಕ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ. ಪಾಟೀಲ ಭರವಸೆ ನೀಡಿದರು.
ಜಿಲ್ಲೆಯ ಬರ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಲು ಭಾನುವಾರ ಬೆಳಗ್ಗೆಯಿಂದಲೇ ಪ್ರವಾಸ ಕೈಗೊಂಡ ಸಚಿವರು, ಹಿಟ್ಟಿನಹಳ್ಳಿ, ಮದಭಾವಿ, ಶಿವಣಗಿ, ದೇವರಹಿಪ್ಪರಗಿ, ಬಮ್ಮನಜೋಗಿ, ಕನ್ನೊಳಿ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಜಮೀನುಗಳಿಗೆ ಭೇಟಿ ನೀಡಿದರು. ಹತ್ತಿ, ತೊಗರಿ, ಸೂರ್ಯಕಾಂತಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಸ್ಥಿತಿಗತಿ ವೀಕ್ಷಿಸಿ, ರೈತರಿಂದಲೇ ಸಮಸ್ಯೆಗಳನ್ನು ಆಲಿಸಿದರು.
“ನಮ್ಮದು ರೈತಪರ ಸರ್ಕಾರ. ರೈತರ ಕಣ್ಣೀರು ಒರೆಸಲು ಸರ್ಕಾರ ಸಿದ್ಧವಿದೆ. ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದ್ದೇನೆ. ರೈತರಿಗೆ ಸೂಕ್ತ ಪರಿಹಾರ ದೊರಕಿಸುವಲ್ಲಿ ಯಾವುದೇ ಲೋಪವಾಗದಂತೆ ವೈಜ್ಞಾನಿಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ಸಚಿವರು ಹೇಳಿದರು.

ಬಿತ್ತಿದ ಪೈರು ಕೈಕೊಡುವ ಆತಂಕ

ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ಬಿತ್ತನೆ ಮಾಡಿದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಕೆಲವೆಡೆ ಬೆಳೆ ಸಂಪೂರ್ಣ ಒಣಗುವ ಹಂತದಲ್ಲಿದ್ದರೆ, ಇನ್ನೂ ಕೆಲವೆಡೆ ಬಿತ್ತನೆಯೇ ಸಾಧ್ಯವಾಗಿಲ್ಲ. ಬಿರುಸಿನ ಗಾಳಿಯಿಂದಾಗಿ ನಿರೀಕ್ಷಿತ ಮಳೆಯೂ ಆಗದಿರುವುದು ಬರ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ಸಚಿವರು ತಿಳಿಸಿದರು.
ಮುಂಗಾರು ಆರಂಭದಿಂದಲೇ ಜಿಲ್ಲೆಯ ಮಳೆ ಮತ್ತು ಕೃಷಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಕುರಿತು ಪೂರ್ವಭಾವಿ ಸಭೆಗಳನ್ನು ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಇದೀಗ ಖುದ್ದು ಸ್ಥಳ ಪರಿಶೀಲನೆ ನಡೆಸಿ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಮದಭಾವಿಯಲ್ಲಿ ರೈತನ ನೋವು ಕಂಡು ಕಳವಳ

ಮದಭಾವಿ ಗ್ರಾಮದಲ್ಲಿ ತೊಗರಿ ಹಾಗೂ ಹತ್ತಿ ಬೆಳೆ ಪರಿಶೀಲಿಸಿದ ಸಚಿವರು, ರೈತ ಸೋಮನಿಂಗ ಬೀರಪ್ಪ ಹಿರೇಕುರುಬರ ಅವರ ಎರಡು ಎಕರೆ ಮಳೆಯಾಶ್ರಿತ ಜಮೀನಿಗೆ ಭೇಟಿ ನೀಡಿದರು.
ಮಳೆ ಕೊರತೆಯಿಂದ ತೊಗರಿ ಬೆಳೆ ಒಣಗಿದ ಬಳಿಕ ಹತ್ತಿ ಬಿತ್ತನೆ ಮಾಡಲಾಗಿತ್ತು. ಕೈಯಿಂದ ಬೀಜ ಊರಿ, ಗೊಬ್ಬರ ಹಾಕಿ ಬೆಳೆ ಉಳಿಸಿಕೊಳ್ಳಲು ರೈತ ನಡೆಸಿದ ಪ್ರಯತ್ನವೂ ಫಲ ನೀಡದೆ ಹೋಗಿರುವುದನ್ನು ಕಂಡ ಸಚಿವರು, ರೈತನ ಅಳಲು ಆಲಿಸಿದರು.
ಇನ್ನೊಬ್ಬ ರೈತನ ಸೂರ್ಯಕಾಂತಿ ಜಮೀನಿಗೆ ಭೇಟಿ ನೀಡಿದ ವೇಳೆ, ನಿಗದಿತ ಅವಧಿಯಲ್ಲಿ ಸುಮಾರು ನಾಲ್ಕು ಅಡಿ ಬೆಳೆಯಬೇಕಿದ್ದ ಬೆಳೆ ಕೇವಲ ಒಂದು ಅಡಿ ಎತ್ತರಕ್ಕೆ ಬೆಳೆದಿರುವುದನ್ನು ಕಂಡ ಸಚಿವರು ಬೆಳೆ ಹಾನಿ ಕುರಿತು ಕಳವಳ ವ್ಯಕ್ತಪಡಿಸಿದರು. ಮಳೆ ಕೊರತೆಯಿಂದ ಶೇ.100ರಷ್ಟು ಹಾನಿಯಾಗಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆಗಸ್ಟ್ ಅಂತ್ಯದಲ್ಲಿ ಬರ ಘೋಷಣೆ ಸಾಧ್ಯತೆ

ಕೇಂದ್ರ ಸರ್ಕಾರದ ನಿಯಮಾನುಸಾರ ಆಗಸ್ಟ್ ಅಂತ್ಯದ ವೇಳೆಗೆ ಬರ ಪರಿಸ್ಥಿತಿ ಘೋಷಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಳೆ ಹಾನಿ ಹಾಗೂ ಮಳೆ ಕೊರತೆಯ ಕುರಿತು ಸಮಗ್ರ ಮತ್ತು ವೈಜ್ಞಾನಿಕ ವರದಿ ಸಿದ್ಧಪಡಿಸಲಾಗುವುದು ಎಂದು ಸಚಿವರು ಹೇಳಿದರು.

2.54 ಲಕ್ಷ ರೈತರಿಗೆ ಬೆಳೆ ವಿಮೆ

ಕಳೆದ ವರ್ಷ ಜಿಲ್ಲೆಯಲ್ಲಿ 97 ಸಾವಿರ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ₹235 ಕೋಟಿ ಬೆಳೆ ವಿಮೆ ಮಂಜೂರಾಗಿತ್ತು. ಈ ವರ್ಷ ಜಿಲ್ಲೆಯಲ್ಲಿ 2.54 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಕುಡಿಯುವ ನೀರಿಗೆ ಸದ್ಯ ಕೊರತೆ ಇಲ್

ಮಳೆಯ ಕೊರತೆಯಿಂದ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದ್ದರೂ ಜಿಲ್ಲೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗದು ಎಂದು ಸಚಿವರು ಸ್ಪಷ್ಟಪಡಿಸಿದರು.
“ಜಿಲ್ಲೆಯಾದ್ಯಂತ ಸುದೀರ್ಘವಾಗಿ ಪರಿಶೀಲನೆ ನಡೆಸಿ ಪೂರ್ಣಪ್ರಮಾಣದ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ವರದಿ ಸಲ್ಲಿಕೆಯಾದ ಬಳಿಕ ರೈತರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರೈತರ ಪ್ರತಿಯೊಂದು ಸಂಕಷ್ಟಕ್ಕೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ” ಎಂದು ಡಾ. ಎಂ.ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಬರಗಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share this