ನಂದಿ ಸಕ್ಕರೆ ಕಾರ್ಖಾನೆಯಲ್ಲಿ ₹12.33 ಕೋಟಿ ವಂಚನೆ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು

8 ಆರೋಪಿಗಳ ಬಂಧನ – ₹11.32 ಕೋಟಿ ಹಣ ವಶ, ಬ್ಯಾಂಕ್ ಖಾತೆಗಳು ಫ್ರೀಜ್

ಸಪ್ತಸಾಗರ ವಾರ್ತೆ,ವಿಜಯಪುರ, ಜೂ.30:
ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿದ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, 8 ಆರೋಪಿಗಳನ್ನು ಬಂಧಿಸಿ ₹11.32 ಕೋಟಿ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಜೂನ್ 12ರಂದು ದಾಖಲಾದ ಪ್ರಕರಣದ ತನಿಖೆಯಲ್ಲಿ, 2020-21ರಿಂದ 2025-26ರವರೆಗೆ ಆರು ಹಂಗಾಮುಗಳಲ್ಲಿ ಕಬ್ಬಿನ ತೂಕದಲ್ಲಿ ಅಕ್ರಮ ನಡೆಸಿ ಸುಮಾರು 34,490.699 ಮೆಟ್ರಿಕ್ ಟನ್ ಕಬ್ಬಿಗೆ ಸಂಬಂಧಿಸಿದಂತೆ ₹12.33 ಕೋಟಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಪೊಲೀಸರ ತನಿಖೆಯ ಪ್ರಕಾರ, ಕಾರ್ಖಾನೆಯ ತೂಕ ಮಾಪನ ವ್ಯವಸ್ಥೆಯಲ್ಲಿದ್ದ ಸಿಬ್ಬಂದಿಯ ಸಹಕಾರದಿಂದ ಬೋಗಸ್ ಟೋಕನ್ ಮತ್ತು ನಕಲಿ ಬಿಲ್ಲುಗಳನ್ನು ಸೃಷ್ಟಿಸಿ, 91 ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಹಣವನ್ನು ಆರೋಪಿಗಳು ಹಂಚಿಕೊಂಡು ಕಾರ್ಖಾನೆಗೆ ಭಾರೀ ನಷ್ಟ ಉಂಟುಮಾಡಿದ್ದರು ಎಂದವರು ವಿವರಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಧರೆಪ್ಪ ದುಂಡಪ್ಪ ನಾವಿ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಆರೋಪಿ ಬಳಿ ಇದ್ದ ₹21 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿದ್ದ ₹4.80 ಕೋಟಿ, ಇತರ ಖಾತೆಗಳಿಂದ ₹5.48 ಕೋಟಿ ಸೇರಿದಂತೆ ಒಟ್ಟು ₹10.50 ಕೋಟಿ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ₹82.07 ಲಕ್ಷ ಮೊತ್ತವನ್ನು ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಲಾಗಿದೆ. ಒಟ್ಟಾರೆ ₹11.32 ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಗ್ರಾಮೀಣ ಡಿಎಸ್‌ಪಿ ಟಿ.ಎಸ್. ಸುಲ್ಪಿ ಅವರ ಮೇಲ್ವಿಚಾರಣೆಯಲ್ಲಿ, ಗ್ರಾಮೀಣ ಸಿಪಿಐ ರಮೇಶ ಅವಜಿ ನೇತೃತ್ವದ ವಿಶೇಷ ತಂಡ ನಡೆಸಿದ್ದು, ಕಡಿಮೆ ಅವಧಿಯಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದೆ ಎಂದರು.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ. ಉಳಿದ ಆರೋಪಿಗಳ ಪತ್ತೆ ಮತ್ತು ತನಿಖೆ ಮುಂದುವರಿದಿದೆ.

Share this