ಸಪ್ತ ಸಾಗರ ವಾರ್ತೆ,ವಿಜಯಪುರ, ಆ. 9: ಜಿಲ್ಲೆಯ ಮಮದಾಪುರ ಬಳಿ ನಿರ್ಮಿಸಲಾಗಿರುವ ಅರಣ್ಯದ ಪ್ರಕೃತಿಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನೆಲೆಸಿದ್ದು, ಶ್ರೀಗಳ ಆಶಯದಂತೆ ವ್ಯಸನಮುಕ್ತ, ಜಗಳರಹಿತವಾಗಿ ಬದುಕಿ ಆದರ್ಶ ಗ್ರಾಮವನ್ನಾಗಿ ಮಾಡಲು ಈ ಭಾಗದ ಗ್ರಾಮಸ್ಥರು ಕೈ ಜೋಡಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಶನಿವಾರ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಅಂದಾಜು ರೂ. 120 ಲಕ್ಷ ವೆಚ್ಚದಲ್ಲಿ ಹೆಸ್ಕಾಂ ನೂತನ ಶಾಖಾಧಿಕಾರಿಗಳ ಕಚೇರಿ ಕಟ್ಟಡ ಮತ್ತು ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್.ಆರ್ ಅನುದಾನಡಿ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಬಳಿಕ ಖಾಜಾ ಬಾಪುಸಾಹೇಬರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಮದಾಪುರದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಕೆರೆ ತುಂಬಿಸಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಲೆ ಮತ್ತು ಕಾಲೇಜುಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ನಿರ್ಮಿಸಲಾಗಿರುವ ಅರಣ್ಯದಲ್ಲಿ ಸಾಯಿನ್ಸ್ ಮ್ಯೂಜಿಯಂ ಪ್ರಾರಂಭಿಸಲಾಗುವುದು. ಈ ಮೂಲಕ ಪ್ರಕೃತಿಯಲ್ಲಿ ಶ್ರೀಗಳನ್ನು ಕಾಣೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಶಿವಾನಂದಸ್ವಾಮಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮುಖಂಡರಾದ ಬಸವರಾಜ ದೇಸಾಯಿ, ಕುಮಾರ ದೇಸಾಯಿ, ಮಲ್ಲಿಕಾರ್ಜುನ ಗಂಗೂರ, ಕೃಷ್ಣಾಜಿ ಕುಲಕರ್ಣಿ, ವೆಂಕಣ್ಣ ಬಿದರಿ, ಈರನಗೌಡ ಬಿರಾದಾರ, ಬಿ. ಡಿ. ಪಾಟೀಲ, ರಫೀಕ್ ಖಾನೆ, ಶಿವಪ್ಪ ನಾಯಕ, ರಮೇಶ ನಾಯಕ, ಸುಖದೇವ ಕಟ್ಟಿಮನಿ, ಮುನ್ನಾಸಾಬ ಗಣಿ, ಎಚ್. ಬಿ. ಹರನಟ್ಟಿ, ಹುಸೇನಸಾಬ ಕಿಜಿ, ಕೌಸರ ಅತ್ತಾರ, ಆರೀಫ್ ಕಿಜಿ, ಬಸಪ್ಪ ಗಲಗಲಿ, ಮುತ್ತೆಶ ಗಡ್ಡದಮಠ, ಮಲ್ಲಿಕಾರ್ಜುನ ರಾಜಂಗಳ, ಬಸವರಾಜ ಪಾಟೀಲ, ಸದಾಶಿವ ನಾಯಕರ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಕಾರ್ಯನಿರ್ವಾಹಕ ಅಭಿಯಂತರ ಮಹಾಂತೇಶ ಚನಗೊಂಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಾದೇವ ತಳವಾರ ಮುಂತಾದವರು ಉಪಸ್ಥಿತರಿದ್ದರು.
ಮಮದಾಪೂರ ಆದರ್ಶ ಗ್ರಾಮವನ್ನಾಗಿ ರೂಪಿಸಲು ಗ್ರಾಮಸ್ಥರು ಕೈ ಜೋಡಿಸಬೇಕು: ಸಚಿವ ಎಂ.ಬಿ. ಪಾಟೀಲ್
