ಸಪ್ತಸಾಗರ ವಾರ್ತೆ ವಿಜಯಪುರ, ಸೆ. 17: ಇತಿಹಾಸ ಹಾಗೂ ಪುರಾಣ ಪುರುಷರಿಂದ ಗುರುತಿಸಲ್ಪಟ್ಟ ಈ ವಿಶ್ವಕರ್ಮ ಸಮುದಾಯವು ಈ ನಾಡಿನ ಹಾಗೂ ದೇಶದ ಸುಂದರ ಕಲೆಗಳ ನಿರ್ಮಾಣದ ಮೂಲಕ ಮಹತ್ವವಾದ ಕೊಡುಗೆ ಕೊಟ್ಟಿದ್ದಾರೆ ಎಂದು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಿಯವರೆಗೆ ಕೌಶಲ್ಯ ಆಧಾರಿತ ವೃತ್ತಿಗಳು ಭೂಮಿಯ ಮೇಲೆ ಅಸ್ಥಿತ್ವದಲ್ಲಿರುತ್ತವೆಯೋ ಅಲ್ಲಿಯವರೆಗೆ ವಿಶ್ವಕರ್ಮರು ಅಜರಾಮರಾಗಿತ್ತಾರೆ. ಇವರು ಅತ್ಯಂತ ಹೃದಯವಂತರು. ದೇವಾನುದೇವತೆಗಳ ಮೂರ್ತಿಗಳು, ಆಭರಣಗಳ ತಯಾರಿಕೆಯಲ್ಲಿ ತಮ್ಮ ಅಮೂಲ್ಯವಾದ ಕಲಾ ಕೌಶಲ್ಯದಿಂದ ಗುರುತಿಸಲ್ಪಡುವ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂತಹ ಕಾರ್ಯಕ್ರಗಳಿಗೆ ತಮ್ಮ ಮಕ್ಕಳನ್ನು ಕರೆತಂದು, ದಾರ್ಶನಿಕರ ಸಂದೇಶ ತಿಳಿಸಿಕೊಡಬೇಕು. ವಿಶ್ವಕರ್ಮರ ಆದರ್ಶಗಳು ತಮ್ಮ ಮನೆ ಮನಗಳಲ್ಲಿ ಬೆಳಗಲಿ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ವಿಶ್ವಕರ್ಮ ಸಮುದಾಯ ಜನರು ಬಹಳ ಶ್ರಮ ಜೀವಿಗಳು, ತಮ್ಮ ಬದುಕು, ಸಂಸಾರವನ್ನು ಬದಿಗಿಟ್ಟು ಸಮ ಸಮಾಜ, ಹಾಗೂ ಕಷ್ಟಗಳನ್ನು ಅರಿತವರು. ಈ ಸಮುದಾಯವು ಉಳಿದ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು. ಇತಿಹಾಸವನ್ನು ಅರಿಯುವ ಮೂಲಕ ಮಹನೀಯರ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಐಶ್ವರ್ಯ ಪತ್ತಾರ ಅವರು ಉಪನ್ಯಾಸ ನೀಡಿ, ಜಗತ್ತನ್ನು ಸೃಷ್ಟಿಸಿದ ಮಹಾನ್ ಪುರುಷರಾದ ವಿಶ್ವಕರ್ಮ ಪರಬ್ರಹ್ಮ. ದೇವಶಿಲ್ಪಿ ವಿಶ್ವಕರ್ಮರು ಶಿವನಿಗಾಗಿ ಲಂಕೆಯನ್ನು ನಿರ್ಮಿಸಿದವರು. ಹಲವಾರು ಕಲೆಗಳನ್ನು ಕರಗತ ಹೊಂದಿದವರು. ರೈತರ ಬೆನ್ನೆಲಬು ವಿಶ್ವಕರ್ಮರು, ಅತಿಥಿ ಸಂಸ್ಕಾರ, ಗುರುಹಿರಿಯರ ಸೇವೆ, ದೈವಭಕ್ತಿ ಹಾಗೂ ಗುರುಗಳ ಸೇವೆ ಇವರ ಕರ್ತವ್ಯಗಳಾಗಿದ್ದವು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಮಹೇಂದ್ರ ಮಹಾಸ್ವಾಮಿಜಿಗಳು ಮೂರುಜಾವರಮಠ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಮಹಾನಗರ ಪಾಲಿಕೆಯ ಉಪ ಆಯುಕ್ತ ವೈ.ಎಸ್ ನಾರಾಯಣಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ಸಂತೋಷ ಬೋವಿ, ಸಮಾಜದ ಮುಖಂಡರುಗಳಾದ ಸುದರ್ಶನ ಪೇಂಟರ್, ಉಮೇಶ ಪೊದ್ದಾರ, ಮೌನೇಶ ಪೊದ್ದಾರ, ಬಾಳು ಗಿರಗಾಂವ್‌ಕರ, ಸಚಿನ ಗಿರಗಾಂವ್‌ಕರ, ಡಾ.ಜ್ಞಾನೇಶ್ವರ ಪಂಡಿತ, ವಿನಾಯಕ ವಿಜಾಪುರಕರ, ಶ್ರೀಕಾಂತ ಕುಂದನಗಾರ, ಈರಣ್ಣ ಪತ್ತಾರ, ವಿದ್ಯಾವತಿ ಅಂಕಲಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭರತ ನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು, ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯು ಗಾಂಧಿ ವೃತ್ತ ಮಾರ್ಗವಾಗಿ ರಂಗಮಂದಿರದಲ್ಲಿ ಸಮಾವೇಶಗೊಂಡಿತು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್ ಗುಣಾರಿ ಸಮಾಜದ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವಕರ್ಮರ ಕೊಡುಗೆ ಅಪಾರ- ಸಂಗಮೇಶ ಬಬಲೇಶ್ವರ
