ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 4 : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ವಿಜಯ ಸಾಧಿಸಿದ್ದಾರೆ. ಈ ಗೆಲುವು ರಾಜ್ಯ ಸರ್ಕಾರದ ಸಾಧನೆಗೆ ಮತದಾರರು ನೀಡಿರುವ ಮನ್ನಣೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಮುಖಂಡರು ಪ್ರಚೋದನಕಾರಿ ಭಾಷಣಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಎಷ್ಟೇ ಅಪಪ್ರಚಾರ ನಡೆಸಿದರೂ ಮತದಾರರು ಮಾತ್ರ ಅಭಿವೃದ್ಧಿ ಮತ್ತು ಸಮಾಜದಲ್ಲಿ ಶಾಂತಿಯನ್ನು ಬಯಸಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಉಮೇಶ ಮೇಟಿ ಮತ್ತು ಸಮರ್ಥ ಶಾಮನೂರು ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ.
ಪ್ರಚಾರದ ವೇಳೆ ರಾಜ್ಯ ಸರ್ಕಾರವನ್ನು ಲಘುವಾಗಿ ಟೀಕೆ ಮಾಡಲಾಯಿತು. ಮತ ವಿಭಜನೆಯ ಪ್ರಯತ್ನಗಳೂ ನಡೆದವು. ಆದರೆ ಮತದಾರರು ಅಪಪ್ರಚಾರಗಳಿಗೆ ಮನ್ನಣೆ ನೀಡಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಬಲಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಮೇಶ ಮೇಟಿ ಮತ್ತು ಸಮರ್ಥ ಶಾಮನೂರು ಅವರಿಗೆ ಅಭಿನಂದನೆ ಸಲ್ಲಿಸಿರುವ ಸಚಿವ ಶಿವಾನಂದ ಪಾಟೀಲ ಅವರು, ನೂತನ ಶಾಸಕರು ಕ್ಷೇತ್ರಗಳನ್ನು ಮಾದರಿಯಾಗಿ ಅಭವೃದ್ಧಿಪಡಿಸಲಿ ಎಂದು ಆಶಿಸಿದ್ದಾರೆ.
ವಿಜಯಪುರ ಶಾಸಕನಿಂದ ಬಿಜೆಪಿಗೆ ಸೋಲು
ವಿಜಯಪುರದ ಶಾಸಕರೊಬ್ಬರು ಬಾಗಲಕೋಟೆಯಲ್ಲಿ ನನ್ನ ಹಾಗೂ ನನ್ನ ಪುತ್ರಿಯ ವಿರುದ್ಧ ಹಗುರ ಪದ ಬಳಸಿ, ಅಪಪ್ರಚಾರ ಮಾಡುವ ಮೂಲಕ ಬಿಜೆಪಿ ಸೋಲಿಸುವ ಗುರಿ ಈಡೇರಿಸಿಕೊಂಡಿದ್ದು, ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಲು ನೆರವಾಗಿದ್ದಾರೆ ಎಂದೂ ಟೀಕಿಸಿದ್ದಾರೆ.
ಬಿಜೆಪಿ ಸೋಲಿಸುವ ಆಂತರಿಕ ಉದ್ದೇಶದಿಂದ ವಿಜಯಪುರದ ಶಾಸಕ ಹಾವೇರಿ ಜಿಲ್ಲೆಯ ಉಪ ಚುನಾವಣೆಗಳಲ್ಲೂ ಪ್ರಚಾರ ಮಾಡಿದ್ದರಿಂದ ಬಿಜೆಪಿ ಸೋತಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಈ ಶಾಸಕ ಪ್ರಚಾರ ಮಾಡಿದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸೋತಿದ್ದು, ಕಾಂಗ್ರೆಸ್ ವಿಜಯ ಸಾಧಿಸಿದೆ ಎಂದು ಕುಟುಕಿದ್ದಾರೆ.


