ಕೋಲಾರ–ಚಿಕ್ಕಬಳ್ಳಾಪುರಕ್ಕೆ ‘ನೀರಿನ ಗ್ಯಾರಂಟಿ’!

2027ರ ಅಂತ್ಯಕ್ಕೆ ಎತ್ತಿನಹೊಳೆ ನೀರು: ಡಿ.ಕೆ.ಶಿವಕುಮಾರ್ ಘೋಷಣೆ

ಸಪ್ತಸಾಗರ ವಾರ್ತೆ,ಮಾಲೂರು, ಆ.10: “ನೀರಿಲ್ಲದೆ ಬದುಕಿಲ್ಲ; ಕೋಲಾರ–ಚಿಕ್ಕಬಳ್ಳಾಪುರದ ಜನರ ನೀರಿನ ಬವಣೆ ನೀಗಿಸಲೇಬೇಕು” ಎಂಬ ಸ್ಪಷ್ಟ ಸಂದೇಶದೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2027ರ ಅಂತ್ಯದೊಳಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸುವ ಮಹತ್ವದ ಘೋಷಣೆ ಮಾಡಿದ್ದಾರೆ.
ಕೋಲಾರ ಜಿಲ್ಲೆ ಮಾಲೂರಿನಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಬಳಿಕ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಹಾಗೂ ಏಳನೇ ಗ್ಯಾರಂಟಿಯಾಗಿ ‘ನೀರಿನ ಗ್ಯಾರಂಟಿ’ ನೀಡಲಾಗುತ್ತಿದೆ ಎಂದು ಘೋಷಿಸಿದರು.

ಎತ್ತಿನಹೊಳೆ ಅಸಾಧ್ಯವೆಂದವರಿಗೆ ತಿರುಗೇಟು

“ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಲೇವಡಿ ಮಾಡುತ್ತಿದ್ದಾರೆ. ಕಷ್ಟವಿದೆ ಎಂಬ ಕಾರಣಕ್ಕೆ ಪ್ರಯತ್ನ ಕೈಬಿಡಬೇಕೇ? ಪಶ್ಚಿಮ ಘಟ್ಟದಿಂದ ಹಾಸನದ ಮೂಲಕ ಕೋಲಾರ–ಚಿಕ್ಕಬಳ್ಳಾಪುರದ ಕೆರೆಗಳಿಗೆ ನೀರು ತರುವ ಸಂಕಲ್ಪ ನಮ್ಮದು” ಎಂದು ಶಿವಕುಮಾರ್ ತಿರುಗೇಟು ನೀಡಿದರು.
ಈಗಾಗಲೇ ಕೆಸಿ ವ್ಯಾಲಿ ಮೂಲಕ 104 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹೆಚ್.ಎನ್. ವ್ಯಾಲಿ ಮೂಲಕ 65 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ಹಂತದಲ್ಲಿ 700ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿತ ನೀರು ಹರಿಸಿ ಅಂತರ್ಜಲ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

‘ಕೋಲಾರ ರೈತರು ರಾಜ್ಯಕ್ಕೆ ಮಾದರಿ’

ಅಂತರ್ಜಲ 2 ಸಾವಿರ ಅಡಿಗೂ ಕೆಳಗೆ ಕುಸಿದರೂ ಆತ್ಮಹತ್ಯೆಗೆ ಶರಣಾಗದೆ ಹಾಲು, ತರಕಾರಿ, ರೇಷ್ಮೆ ಹಾಗೂ ಹೂ ಬೆಳೆದು ಬದುಕು ಕಟ್ಟಿಕೊಂಡಿರುವ ಕೋಲಾರದ ರೈತರನ್ನು ಮುಖ್ಯಮಂತ್ರಿ ಶ್ಲಾಘಿಸಿದರು.
“ಕೃಷಿ ನಿಮ್ಮ ಸಂಸ್ಕೃತಿ, ರೈತರು ನಮ್ಮೆಲ್ಲರ ಆಸ್ತಿ. ರೈತರ ಕಣ್ಣೀರು ಒರೆಸುವ ಸರ್ಕಾರ ನಿಮ್ಮ ಮುಂದೆ ನಿಂತಿದೆ. ಹೋರಾಟವಿಲ್ಲದೆ ಪ್ರಗತಿ ಸಾಧ್ಯವಿಲ್ಲ” ಎಂದು ಹೇಳಿದರು.

‘ಅಧಿಕಾರ ಸಿಂಹಾಸನವಲ್ಲ, ಜನಸೇವೆಯ ಜವಾಬ್ದಾರಿ’

“ಅಧಿಕಾರ ಶಕ್ತಿಯ ಸಂಕೇತವಲ್ಲ, ಜವಾಬ್ದಾರಿಯ ಸಂಕೇತ. ಅಧಿಕಾರವನ್ನು ಸಿಂಹಾಸನವೆಂದು ಭಾವಿಸಿಲ್ಲ. ಜನಸೇವೆಗೆ ಸಿಕ್ಕ ಅವಕಾಶ ಎಂದು ತಿಳಿದಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಜನರೇ ದೇವರು” ಎಂದು ಶಿವಕುಮಾರ್ ಹೇಳಿದರು.
ಐದು ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಪ್ರತಿವರ್ಷ ₹52 ಸಾವಿರ ಕೋಟಿ ಮೀಸಲಿಟ್ಟಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿವೆ ಎಂದರು.

ಹುಂಡಿ ಕಳ್ಳರಿಗೆ ಕಠಿಣ ಶಿಕ್ಷೆ

ದೇವಾಲಯಗಳ ಹುಂಡಿ ಹಣದ ಸುರಕ್ಷತೆ ಕುರಿತು ಮಾತನಾಡಿದ ಮುಖ್ಯಮಂತ್ರಿ, “ದೇವರ ಹುಂಡಿಗೆ ಕೈಹಾಕುವವರಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಕರೆ ನೀಡಿದರು. ದೊಡ್ಡ ದೇವಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪೊಲೀಸ್ ಠಾಣೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದರು.

ಮತದಾನದ ಹಕ್ಕು ಕಾಪಾಡಿಕೊಳ್ಳಿ

ಎಸ್‌ಐಆರ್‌ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಶಿವಕುಮಾರ್, “ನಿಮ್ಮ ಮತ ನಿಮ್ಮ ಹಕ್ಕು. ಮತದಾನದ ಹಕ್ಕು ಕಳೆದುಕೊಂಡರೆ ಹಲವು ಯೋಜನೆಗಳಿಂದಲೂ ವಂಚಿತರಾಗಬಹುದು” ಎಂದು ಎಚ್ಚರಿಸಿದರು.

ಯುವಕರಿಗೆ ₹1,000 ಕೋಟಿ

ಯುವಕರಲ್ಲಿ ನಾಯಕತ್ವ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉತ್ತೇಜಿಸಲು ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ‘ಭಾರತ ಜೋಡೋ ಯುವ ಶಕ್ತಿ ಸಂಘ’ ರಚಿಸಲಾಗುವುದು. ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷದಂತೆ ಒಟ್ಟು ₹1,000 ಕೋಟಿ ಅನುದಾನ ಮೀಸಲಿಡಲಾಗಿದೆ. ರಾಜ್ಯದಲ್ಲಿ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

‘ಜಿಲ್ಲೆಯ ಎಲ್ಲ ಶಾಸಕರೂ ಮುಖ್ಯಮಂತ್ರಿಗಳೇ’

“ಜಿಲ್ಲೆಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಆದರೆ ಜಿಲ್ಲೆಯ ಪ್ರತಿಯೊಬ್ಬ ಶಾಸಕರೂ ಮುಖ್ಯಮಂತ್ರಿ ಮತ್ತು ಸಚಿವರೇ. ಅವರಿಗೆ ಶಕ್ತಿ ತುಂಬುವುದು ನನ್ನ ಕರ್ತವ್ಯ” ಎಂದು ಶಿವಕುಮಾರ್ ಘೋಷಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಾಲ್ಲೂಕಿನಲ್ಲಿ 15 ದಿನಕ್ಕೊಮ್ಮೆ ಜನರ ಅಹವಾಲು ಸ್ವೀಕರಿಸಲಿದ್ದು, ಶಾಸಕರು ಪಂಚಾಯಿತಿ ಮಟ್ಟಕ್ಕೆ ತೆರಳಿ ಜನರ ಸಮಸ್ಯೆ ಆಲಿಸಬೇಕು. ಇದಕ್ಕಾಗಿ ‘ಪ್ರಜಾಸೇವೆ’ ಇಲಾಖೆ ಆರಂಭಿಸಲಾಗುವುದು ಎಂದರು.
ಕೋಲಾರ ಎಪಿಎಂಸಿಗೆ 60 ಎಕರೆ ಜಮೀನು ಮಂಜೂರು, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, “ಅಧಿಕಾರ ನಶ್ವರ, ಸಾಧನೆ ಅಜರಾಮರ. ನಿಮ್ಮ ನಿರೀಕ್ಷೆ ಹುಸಿ ಮಾಡುವುದಿಲ್ಲ” ಎಂದು ಭರವಸೆ ನೀಡಿದರು.

Share this