ವಸತಿ‌ ನಿಲಯಗಳಲ್ಲಿ ಮನೆ ವಾತಾವರಣ ನಿರ್ಮಿಸುತ್ತಿದ್ದೇವೆ: ಜಿಲ್ಲಾಧಿಕಾರಿ ಡಾ.‌ ಆನಂದ‌

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 7:
ವಸತಿ ನಿಲಯಗಳು ಮಕ್ಕಳ‌ ಭವಿಷ್ಯ ರೂಪಿಸುವ ಕಲಿಕಾ ಕೇಂದ್ರಗಳಾಗಿದ್ದು, ಈ ಕೇಂದ್ರಗಳಲ್ಲಿ ಮಕ್ಕಳ‌ ಓದಿಗೆ‌ ಪೂರಕವಾಗಿ ಅವರ ಉತ್ತಮ‌ ವ್ಯಕ್ತಿತ್ವ ರೂಪಿಸಲು ಮನೆಯ ವಾತಾವರಣ ನಿರ್ಮಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ‌ ಕೆ. ಅವರು ಹೇಳಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಹಾಗೂ ಸಮಾಜ‌ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಫರ್ಲ‌ ಹೊಟೇಲ್ ಹಿಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ 2025-26ನೇ ಸಾಲಿನ‌ ವಸತಿ ನಿಲಯ ವಾಸ್ತವ್ಯ ಹಾಗೂ ವಿವಿಧ ವಿನೂತನ ಕಾರ್ಯಕ್ರಮಗಳ ಸಮಾರೋಪ‌ ಸಮಾರಂಭ ಹಾಗೂ ಕ್ರೀಡಾಕೂಟ- ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ
ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ‌‌ ಜಿಲ್ಲಾಮಟ್ಟದ ಅಧಿಕಾರಿಗಳನ್ನು
ಹಾಸ್ಟೆಲ್‌ ಮೆಂಟರ್ ಗಳಾಗಿ ನೇಮಿಸಿ,ಬಿಡುವು ಮಾಡಿಕೊಂಡು ನಿಯೋಜಿಸಿದ‌ ವಸತಿ ನಿಲಯಗಳಿಗೆ ಆಗಾಗ‌ ತೆರಳಿ,ಮಕ್ಕಳೊಂದಿಗೆ ಬೆರೆತು‌ ಅವರ ಕಲಿಕೆ‌ ಮನೋಸ್ಥೈರ್ಯ ಬೆಳೆಸುವುದರ‌ ಜೊತೆಗೆ ನಿಲಯ‌ ಪಾಲಕರ ಜೊತೆಗೂಡಿ ಹಾಸ್ಟೇಲ್ ಸುಧಾರಣೆ ಮಾಡುತ್ತಿದ್ದಾರೆ.‌ಅಲ್ಲಿ ಬೇಕಾಗಿರುವ ಪಾಠೋಪಕರಣ ಪಿಠೋಪಕರ‌ಣ ಕಲಿಕಾ ಸಾಮಗ್ರಿ,ಮನೋಬಲ‌ ಹೆಚ್ಚಿಸುವ ಮಾನಸಿಕ‌ ದೃಢತೆ ಹೊಂದಲು‌ ಒತ್ತಡ ನಿರ್ವಹಣಾ ಕುಶಲಗಳಾಗಿಯೂ, ಆಯಾ ವಸತಿ ನಿಲಯದ‌ ಮಕ್ಕಳ‌ ಆರೋಗ್ಯದ ಕಡೆಗೆ ಗಮನ‌ ನೀಡುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ಔಷಧೋಪಚಾರ‌ ಒದಗಿಸಿಕೊಟ್ಟು ಮಕ್ಕಳಲ್ಲಿ ನಮ್ಮೊಂದಿಗಿದ್ದಾರೆ ಎಂಬ ಮನೋಭಾವ ಹೊಂದುವ ಜೊತೆಗೆ ಮನೆಯಿಂದ‌ ದೂರ ಇರುವ‌ ಭಾವನೆ‌ ತಾಳದೇ ಎಲ್ಲರೊಂದಿಗೂ ಬೆರೆಯುವ ಸದಾವಕಾಶ ಹಾಸ್ಟೆಲ್ ಮೆಂಟರ್ಸ್ ಅವರು ಸ್ವಯಂ‌ ಪ್ರೇರಿತರಾಗಿ ನಿರ್ವಹಿಸುತ್ತಿದ್ದಾರೆ.‌
ಇದರಿಂದ‌‌ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ, ಜೀವನದಲ್ಲಿ ಹಿಂಜರಿಯುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹಾಸ್ಟೆಲ್ ಮೆಂಟರ್ಸ್ ಅವರು ಸ್ವಯಂ ಪ್ರೇರಿತರಾಗಿ ಕಾರ್ಯ ನಿರ್ವಹಿಸಿ, ಮಕ್ಕಳ‌ ಸುಂದರ‌ ಕನಸಿಗೆ ಎಳೆ ವಯಸ್ಸಿನಲ್ಲಿ ಬಲ ತುಂಬುತ್ತಿದ್ದಾರೆ ಎಂದು ಪ್ರಶಂಸಿದರು.
ಮೆಂಟರ್ಸ್ ಆಗಿ ನೇಮಿಸಿರುವ ಕೆಲವು ಅಧಿಕಾರಿಗಳು ತಮ್ಮ‌ಕಾರ್ಯ ಒತ್ತಡದ‌‌ ಮಧ್ಯದಲ್ಲೂ ತಮ್ಮ ಅನುಭವವನ್ನು ಮಕ್ಕಳಿಗೆ ಧಾರೆ ಎರೆದು, ಮಾದರಿ‌‌ ಎನಿಸಿದ್ದಾರೆ.‌ಇನ್ನೂ ಕೆಲವರು ಕ್ರೀಯಾಶಿಲತೆ ಮೈಗೂಢಿಸಿಕೊಂಡು
ವಸತಿ ನಿಲಯದ ಮಕ್ಕಳೊಂದಿಗೆ ಬೆರೆಯುವಂತೆ ಸಲಹೆ ನೀಡಿದರು. ನಿಲಯ ಮೇಲ್ವಿಚಾರಕರು ಹಾಸ್ಟೇಲಿಗೆ ಆಗಾಗ ಆಗಮಿಸದೇ ಇರುವ ಮೆಂಟರ್ಸ ಅವರನ್ನು ಆಹ್ವಾನಿಸಬೇಕು ಎಂದರು.
ವಸತಿ ನಿಲಯಗಳಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಆದ್ಯತೆ, ಜೀವನದ ಸಾರ ಅರ್ಥೈಸಿಕೊಳ್ಳಲಿಕ್ಕೆ ಶಿಕ್ಷಣ ಬಹುಮುಖ್ಯವಾಗಿದೆ ಎಂದ ಅವರು, ಮಕ್ಕಳು‌ ಪ್ರಶ್ನೆ ಕೇಳುವ ಮನೋಭಾವ ಹೊಂದಬೇಕು. ಓದಿದ್ದನ್ನು ಸಹಪಾಠಿಗಳೊಂದಿಗೆ‌ ಪರಸ್ಪರ ಚರ್ಚಿಸಬೇಕು. ಆರೋಗ್ಯಕರ ಚರ್ಚೆ ಕಲಿಕೆಗೆ ಪೂರಕವಾಗಿ ಮಾತ್ರವಲ್ಲದೃ ಅದು ಶಾಶ್ವತ ನೆನಪಿಟ್ಟುಕೊಳ್ಳಲು ಸಹಕಾರಿಯಾಗಿದೆ. ಗುಂಪು ಚರ್ಚೆಯಿಂದ ಚರ್ಚಿಸುವ ವಿಷಯ ದೀರ್ಘಾವಧಿ ನೆನಪಿನಲ್ಲಿ ಉಳಿಯುತ್ತದೆ.‌ಮಕ್ಕಳು ರೂಢಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮನ್ನು ನಾವು ಒಡ್ಡಿಕೊಳ್ಳಲು ವಿಷಯ ಅರ್ಥೈಸಿಕೊಳ್ಳಲು‌ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಾರ್ಡನ್ ಕಾರ್ಯ ನಿರ್ವಹಿಸಬೇಕು ಎಂದರು.‌
ಹಾಸ್ಟೇಲ್ ಡೇ ದಿನ ಹಳೆಯ ಸಾಧಕ ವಿದ್ಯಾರ್ಥಿಗಳನ್ನು ಕರೆದು, ಅವರ ಸಾಧನೆ ಬಗ್ಗೆ ಮಾತನಾಡಿಸಬೇಕು. ಇದರಿಂದ ಮಕ್ಕಳಿಗೆ ಪ್ರೇರಣೆಯಾಗುತ್ತದೆ. ಎಲ್ಲ ವಸತಿ ನಿಲಯಗಳಲ್ಲಿ ಇದನ್ನು ತಪ್ಪದೇ ನಿರ್ವಹಿಸಿ,ಈ ದಿಸೆಯಲ್ಲಿ ಎಲ್ಲರೂ ಕಾರ್ಯನಿರ್ವಹಿಸುವ ಮೂಲಕ‌ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಹಗಲಿರುಳು ಶ್ರಮಿಸಬೇಕು ಎಂದರು.ಸರ್ಕಾರದ ಸೌಲಭ್ಯ ಮಕ್ಕಳಿಗೆ ತಲುಪಿಸಬೇಕು ಎಂದರು.
ಈಗಾಗಲೇ ನೇಮಕ ಮಾಡಿದ ಹಾಸ್ಟೆಲ್ ಮೆಂಟರ್ ಗಳು ನಿಯೋಜಿತ ವಸತಿ ನಿಲಯಗಳಿಗೆ ಆಗಾಗ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಅವರ ಶೈಕ್ಷಣಿಕ ಹಾಗೂ ಉತ್ತಮ ವ್ಯಾಸಂಗಕ್ಕೆ ಮಕ್ಕಳನ್ನು ಪ್ರೇರೆಪಿಸಿ ಅವರ ಜೀವನ ಸುಂದರಗೊಳಿಸಬೇಕು ಎಂದು ಜಿಲ್ಲಾಧಿಕಾರಿ‌ ಸಲಹೆ ಮಾಡಿದರು.‌
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ‌ ವಿಜೇತರಿಗೆ ಇದೇ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾಜ‌‌‌ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಪ್ರಾಸ್ತಾವಿಕ ಮಾತನಾಡಿ,‌ ಜಿಲ್ಲಾ ಮಟ್ಟ, ವಿಭಾಗ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಿಗೆ ಅಭಿನಂದಿಸಿದ ಅವರು, ಇಲಾಖೆಯ ಎಲ್ಲರೂ ತಮಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ, ವಿಶೇಷ ಸಾಧನೆ ಮಾಡಬೇಕು ಎಂದರು.
ಸಿಂದಗಿ ತಾಲೂಕಿನ ಸಹಾಯಕ ನಿ‌ರ್ದೇಶಕಿ ಭವಾನಿ ಪಾಟೀಲ, ಬಸವನ ಬಾಗೇವಾಡಿ ತಾಲೂಕಿನ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ, ಸಹಾಯಕ ನಿರ್ದೇಶಕ ಉಮೇಶ ಲಮಾಣಿ,‌ನಿರಾಶ್ರೀತರ ಪರಿಹಾರ ಕೇಂದ್ರದ ಪದ್ಮಜಾ ಪಾಟೀಲ,‌ ಟಿ.ಬಿ.ಮಂಟೂರ, ಅರವಿಂದ‌ ಲಂಬು, ಕೆ.ಬಿ‌ ಕೋರೆ, ಲೆಕ್ಕ ಅಧೀಕ್ಷಕ ಎಂ.ಟಿ ಬಿರಾದಾರ, ಸತೀಶ ಸಜ್ಜನ,ಸದಾನಂದ ಬಡಿಗೇರ ವಿವಿಧ ತಾಲೂಕಿನ ಅಧಿಕಾರಿಗಳು, ವಾರ್ಡನ್ ಇದ್ದರು.

Share this