ಸಚಿವ ಎಂಬಿಪಿ ಸಾಧನೆಯನ್ನು ಪ್ರತ್ಯಕ್ಷವಾಗಿ ದರ್ಶನ ಮಾಡಿಸುತ್ತೇವೆ-ಗಣಿಹಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 16 :
ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವ ಡಾ.ಎಂ.ಬಿ. ಪಾಟೀಲರಿಗೆ ನೀಡಿರುವ ಪಂಥಾಹ್ವಾನವನ್ನು ಸ್ವೀಕರಿಸಿದ್ದು, ನಾವೇ ದಾಖಲೆ ಸಮೇತ, ಆಧಾರ ಸಹಿತವಾಗಿ ಸಚಿವ ಡಾ.ಎಂ.ಬಿ. ಪಾಟೀಲರು ನೀರಾವರಿಗೆ ನೀಡಿದ ಕೊಡುಗೆಯನ್ನು ವಿವರಿಸುತ್ತೇವೆ, ಬಿಜೆಪಿ ನಾಯಕರೇ ವೇದಿಕೆ ಸಿದ್ದಪಡಿಸಲಿ, ಕೇವಲ‌ ಕಾಗದ ಅಷ್ಟೇ ಅಲ್ಲ ನೀರಾವರಿ ಆಗಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರನ್ನು ತೋರಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ತುಂಬುವ ಯೋಜನೆ ಸಚಿವ ಡಾ.ಎಂ.ಬಿ. ಪಾಟೀಲರ ಪರಿಕಲ್ಪನೆಯ ಕೂಸು, ಆ ವೇಳೆ ನಾನು ಸಹ ಇದು ಹೇಗೆ ಸಾಧ್ಯ ಎಂದು ಕೇಳಿದ್ದೆ, ಆಗ ಸಚಿವ ಪಾಟೀಲರು ಅಸಾಧ್ಯವಾದ ಈ ಯೋಜನೆಯನ್ನು ರೂಪಿಸಿದರು, ಇದಕ್ಕಾಗಿ ಹೋರಾಡಿದರು, ಆ ಸಂದರ್ಭದಲ್ಲಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆ ತುಂಬುವ ನೀರು ಯೋಜನೆಗೆ ಅನುಮೋದನೆ ದೊರಕಿತು, ಇದಕ್ಕೆ ಸಚಿವ ಡಾ.ಎಂ.ಬಿ. ಪಾಟೀಲರು ಸಹ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ, ಆದರೆ ಇಡೀ ಕೆರೆ ತುಂಬುವ ಯೋಜನೆ ತಮ್ಮ ಸಾಧನೆಯನ್ನು ಬಿಜೆಪಿ ಲೇಬಲ್ ಅಂಟಿಸಿಕೊಳ್ಳಲು ಹೋಗುತ್ತಿದೆ ಎಂದರು.
ಬಬಲೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಟೀಕೆ ಮಾಡಿರುವ ಬಿಜೆಪಿ ನಾಯಕರು ಬಬಲೇಶ್ವರ ಕ್ಷೇತ್ರವನ್ನೇ ನೋಡಿಲ್ಲ, ಒಮ್ಮೆ ಅವರು ನೋಡಿ ಬರಲಿ, ಅಷ್ಟೊಂದು ಸುಂದರವಾಗಿ ತಮ್ಮ ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ, ಒಮ್ಮೆ ಬೇಕಾದರೆ ನಾವೇ ಅವರನ್ನು ಕರೆದುಕೊಂಡು ಹೋಗುತ್ತೇವೆ ಎಂದರು.
ಸಚಿವ ಡಾ.ಎಂ.ಬಿ. ಪಾಟೀಲರು ನೀರಾವರಿಗೆ ಏನೂ ಮಾಡಿಯೇ ಇಲ್ಲ, ಕೆರೆ ತುಂಬುವ ಯೋಜನೆ ಸೇರಿದಂತೆ ಎಲ್ಲವೂ ಬಿಜೆಪಿ ಸಾಧನೆ ಎಂದು ಹೇಳಿಕೊಂಡು ಹೊರಟಿರುವುದು ಸರಿಯಲ್ಲ, ಬಿಜೆಪಿ ನಾಯಕರು ನೀರಾವರಿ ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ಮೊದಲು ತಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಿ ನೋಡೋಣ ಎಂದರು.
ಇಸ್ರೇಲ್ ನಮ್ಮ ಪಿತೃದೇಶ ಎಂದು ದೇಶದ ಪ್ರಧಾನಿಗಳು ಅತ್ಯಂತ ನಾಚಿಕೆಗೇಡಿನ ಸಂಗತಿ, ದೇಶದ ಪರಿಸ್ಥಿತಿ ಆಧರಿಸಿ ಇಂಡಿ ಶಾಸಕರು ಪ್ರಧಾನಿ ಅವರನ್ನು ಟೀಕಿಸಿದ್ದಾರೆ, ಅದರಲ್ಲಿ ತಪ್ಪೇನು? ಎಂದರು.
ಇಂಡಿ ಶಾಸಕರು ಏನೂ ಕೆಲಸವೇ ಮಾಡಿಲ್ಲ ಎಂದು ಟೀಕೆ ಮಾಡಿರುವುದರಲ್ಲಿ ಹುರುಳಿಲ್ಲ, ಜಿಲ್ಲಾ‌ ಕೇಂದ್ರದ ಸೌಲಭ್ಯಗಳು ಅಲ್ಲಿವೆ, ಇಂಡಿಯನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಿ, ಎಲ್ಲ ಸಮಾಜದವರಿಗೂ ಅಧಿಕಾರ ಹಂಚಿಕೆ ಮಾಡಿದ ಉದಾಹರಣೆ ಇದೆ ಎಂದರು.

ಪೆಟ್ರೋಲ್ ಸಬ್ಸಿಡಿ ನೀಡಿ
ಅಲಿಪ್ತ ನೀತಿ ಅನುಸರಿಸಿದ ನೆಹರೂ ಅವರದ್ದು ಶ್ರೇಷ್ಠ ವಿದೇಶಾಂಗ ನೀತಿ, ಆದರೆ ಮೋದಿಜಿ ಅವರ ವಿದೇಶಾಂಗ ನೀತಿಯಿಂದ ದೇಶ ಹಾಳಾಗುತ್ತಿದೆ, ಪಂಚ ರಾಜ್ಯ ಚುನಾವಣೆ ತನಕ ಸುಮ್ಮನಿದ್ದು ಏಕಾಏಕಿಯಾಗಿ ಪೆಟ್ರೋಲ್ ಡಿಸೈಲ್ ಬೆಲೆ ಏರಿಕೆ ಮಾಡಿದೆ, ಈ ಹಿಂದೆ ಪೆಟ್ರೋಲ್ ಸಬ್ಸಿಡಿ ನೀಡಿದ ಉದಾಹರಣೆ ಇದೆ ಎಂದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ತೊಡಗಿದೆ ಎಂದು ಪ್ರಧಾನಿ ಮೋದಿ ಅವರು ಟೀಕೆ ಮಾಡಿದ್ದರು, ಪಕ್ಕದಲ್ಲಿಯೇ ಲಂಚವನ್ನು ಚೆಕ್ ರೂಪದಲ್ಲಿ ಪಡೆದುಕೊಂಡು ಜೈಲು ಸೇರಿದ ವ್ಯಕ್ತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಈ ಆರೋಪ ಮಾಡಲು ನಿಮಗೆ ಹೇಗೆ ಮನಸ್ಸು ಬಂತು ಎಂದು ಪ್ರಶ್ನಿಸಿದರು.
ಮುಖಂಡರಾದ ಡಾ.ರವಿಕುಮಾರ ಬಿರಾದಾರ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this