ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 22:
ಶುದ್ಧ, ನಂಬಿಕೆ, ಕರ್ತವ್ಯ ಒಂದೆಡೆ ಸೇರಿದರೆ ಜಗತ್ತು ಉದ್ಧಾರವಾಗುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ನಡೆದರೆ ಇಲ್ಲಿಯೂ ಇದ್ದಂತೆ. ಅಕ್ರಾಳ, ವಿಕ್ರಾಳ, ಕರಾಳ ಈ ಬಾರಿಯೂ ಇದ್ದದ್ದೇ, ಯುದ್ದ ಅಲ್ಲಿ ಅಷ್ಟೇ ಅಲ್ಲ ಇಲ್ಲಿಯೂ ಇದ್ದಂತೆಯೇ ಎಂದು ಕತಕನಹಳ್ಳಿಯ ಶ್ರೀ ಶಿವಯ್ಯ ಮಹಾಸ್ವಾಮೀಜಿ ಕಾಲಜ್ಞಾನದ ಹೇಳಿಕೆ ನುಡಿದರು.
ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ತ್ಯಾ ಅವರ ಜಾತ್ರಾ ಮಹೋತ್ಸವ ಪ್ರಯುಕ್ತ ಗುರು ಕರುಣೆಯ ಮೂಲಕ ಶ್ರೀ ಶಿವಯ್ಯ ಮಹಾಸ್ವಾಮೀಜಿ ಭವಿಷ್ಯದ ಕಾಲಜ್ಞಾನ ಹೇಳಿಕೆ ನೀಡುವುದು ಸಂಪ್ರದಾಯ.
ಈ ಸಂಪ್ರದಾಯ ಹಿನ್ನೆಲೆಯಲ್ಲಿ ಈ ಬಾರಿಯೂ ರವಿವಾರ ಕತಕನಹಳ್ಳಿಯ ಲಗಮವ್ವ ದೇವಿ ದೇವಾಲಯದ ಎದುರು ಶ್ರೀ ಶಿವಯ್ಯ ಸ್ವಾಮೀಜಿಗಳು ಗುರು ಕರುಣೆಯ ನುಡಿಗಳನ್ನಾಡಿದರು.
ಶುದ್ಧ, ನಂಬಿಕೆ ಹಾಗೂ ಕರ್ತವ್ಯದ ಶಾಂತಿ ಸಭೆ ನಡೆದಿದೆ.
ಈ ಎಲ್ಲವೂ ಕೂಡಿದರೆ ಜಗತ್ತು ಉದ್ಧಾರ, ಹೀಗಾಗಿ ಜಗತ್ತು ಉಳಿಸಲು ಈ ತತ್ವಗಳು ಮೀಟಿಂಗ್ ಮಾಡುತ್ತಿವೆ ಎಂದೂ ಅವರು ನುಡಿದರು.
ಕಾವಿ, ಖಾದಿ, ಖಾಕಿ, ಮೂರು ಒಳಗೆ ಜಗಳ ಆಗ್ತದ ಎಂದು ಹಿಂದೆಯೂ ಹೇಳಿದೆ. ಕಾವಿ, ಖಾದಿ,ಖಾಕಿ, ಜೊತೆಗೆ ಕಪ್ಪು, ಹಸಿರು, ನೀಲಿ ಇನ್ನಷ್ಟೂ ಬಣ್ಣ ಕೂಡಿ ಮಿಕ್ಸರ್ ಆಗುತ್ತಿವೆ. ಗದ್ದಲವಾಗುತ್ತಿದೆ. ಹೀಗಾಗಿಯೇ ಇದನ್ನು ತಪ್ಪಿಸಲು ಶುದ್ಧ, ನಂಬಿಕೆ, ಕರ್ತವ್ಯದ ಮೀಟಿಂಗ್ ನಡೆಯುತ್ತಿವೆ ಎಂದರು.
ಕಳೆದ ಬಾರಿ ಭಕ್ತಿಯ ಭಾವ ಪರವಶರಾಗಿ ಕೇವಲ 3.35 ನಿಮಿಷ ಅಷ್ಟೇ ಕಾಲಜ್ಞಾನ ನುಡಿದಿದ್ದ ಗುರುಗಳು ಈ ಬಾರಿ 12.13 ನಿಮಿಷಗಳ ಕಾಲ ಜ್ಞಾನ ಹೇಳಿಕೆ ನೀಡಿ, ಭವಿಷ್ಯದ ಮುನ್ನೋಟವನ್ನು ತೆರೆದಿಟ್ಟರು.
ಅಹಂಕಾರ ಮಾಡಿದವರೆಲ್ಲ ಮಣ್ಣಾಗಿ ಹೋಗುತ್ತಾರೆ. ನಾ ಹಿಂದೆಯೂ ಹೇಳಿದೆ
ಗಡ್ಡ, ಗುಡ್ಡ, ಗಿಡ್ಡ ಜಗಳಾಡಿ ಗದ್ದಲ ಹಿಡಿಸುತ್ತಾರೆ ಎಂದು, ಈಗ ಅದೇ ಆಗುತ್ತಿದೆ….ಅಲ್ಲಿ ಯುದ್ದ ನಡೆದಿದೆ ನಮಗೆ ಸಂಬಂಧವಿಲ್ಲ ಎಂದೇನಿಲ್ಲ, ಇಲ್ಲಿಯೂ ಯುದ್ದ ನಡೆದಂತೆಯೇ ಎಂದರು.
ಆನೆ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿ ಬೆಲೆ ಕೋಳಿಗೆ, ಕೋಳಿ ಬೆಲೆ ಮನುಷ್ಯನಿಗೆ ಅಂದರೆ ಮನುಷ್ಯನಿಗೆ ಯಾವ ಕಿಮ್ಮತ್ತೂ ಉಳಿದಿಲ್ಲ ಎಂದರು.
ಈ ಸಲಾ ಮಳೆಗಾಲ ಭಾಳ ಮಜಾ… ಎಂದು ಮಳೆಗಾಲದ ಬಗ್ಗೆ ವಿಶ್ಲೇಷಿಸಿದ ಅವರು, ಮಳೆಗಾಲ ಈ ಬಾರಿ ಭಾಳ ಮಜಾ ಇದೆ. ಮಳೆ ಬೆನ್ನ ಬೆಳಿ ಹತ್ತೈತಿ…ಮುಂದ ಬೆಳಿ ಬೆನ್ನ ಮಳಿ ಹತ್ತೈತಿ….. ಎನ್ನುತ್ತ ಐದು ಪ್ರಕಾರದ ಮಳಿ ಆಗ್ತೈತಿ. ಅತಿವೃಷ್ಟಿ, ಅಲ್ಪವೃಷ್ಟಿ, ಸಮವೃಷ್ಟಿ, ಅನಾವೃಷ್ಟಿ ಆಗ್ತೈತಿ ಎನ್ನುವ ಮೂಲಕ ಮಳೆ ಅಭಾವ, ಮಳೆ ಹೆಚ್ಚಳ, ಅಕಾಲಿಕ ಮಳೆ ಮೊದಲಾದವುಗಳು ಸಂಭವಿಸಲಿವೆ ಎಂದು ಸಾಂಕೇತಿಕವಾಗಿ ನುಡಿದರು.
ವ್ಯಾಪಾರ, ವ್ಯವಹಾರ ಏರ್ತಾ ಇಳಿತಾವ.
ಹೆಣ್ಣ ಮಕ್ಕಳು ವೇಷ, ಭೂಷಣ,ಸಂಭಾಷಣದಲ್ಲಿ ನಮ್ಮ ಭವ್ಯ ಸಂಸ್ಕೃತಿ ಅನುಸರಿಸಬೇಕು. ಆರಾಧಿಸಬೇಕು ಎಂದರು.
ಉಳಿವಿಯಲ್ಲಿ ಉರುಳುತ್ತಾ ಬರುವ ಶಬ್ದ…ನಾನು ಮೇಲು ನಾನು ಮೇಲು ಎನ್ನುವ ಅಹಂಕಾರವನ್ನು ಅಡಗಿಸುತ್ತದೆ. ಹಸಿರು ನಾಮದ ಒಡೆಯ, ಹಂಡ ಕುದುರೆಯನೇರಿ, ಅರಸಾಗಿ ಬರುವಾಗ ದೈತ್ಯರನ್ನು ಸಂಹರಿಸುತ್ತಾನೆ. ಮಸಲತ್ತು ಮಾಡಿ ಹಿಂಸೆ ಕೊಡುವ ದೈತ್ಯರಿಗೆ ಸಂಹಾರ ಮಾಡಿ ಅವರನ್ನು ಪಾತಾಳಕ್ಕೆ ತಲುಪಿಸುವನು ಎಂದರು.
ಯುದ್ದ ಎಲ್ಲ ಕಡೆ ನಡೆದ ಬಿಟ್ಟೈತಿ, ಜಾತಿ, ಮತ, ಪಂಥ ಏನೂ ಹೇಳಬೇಡಿ, ಯಾರಾದರೂ ನೀವು ಯಾರು ಎಂದು ಕೇಳಿದರೆ ನೀವು ಭಾರತೀಯರು ಎಂದಷ್ಟೇ ಹೇಳಿ ಎಂಬುದನ್ನು ಪ್ರತಿಪಾದಿಸಿದರು.
ಅಕ್ರಾಳ, ವಿಕ್ರಾಳ, ಕರಾಳ….ಹೈರಾಣ ಈ ಬಾರಿಯೂ ಹಂಗೆ… ಇರ್ತಾವ ಎಂದ ಅವರು ಇದು ಹೆಸರೇ ಹೇಳಿದಂತೆ ಪರಾಭವ ನಾಮ ಸಂವತ್ಸರ….ಅಂದರೆ ಸೋಲುವುದು,
ಸದಾಶಿವನ ಸಲುವಾಗಿ ಸೋಲಿರಿ, ಆಗ ನೀವು ಎಲ್ಲ ಕಡೆ ಗೆಲುತ್ತಿರಿ ಎಂದರು.
ಚಹಾ ಮಾರುವವನು ಪ್ರಧಾನಿಯಾಗುತ್ತಾನೆ ಎಂದು ಅನೇಕ ವರ್ಷಗಳ ಹಿಂದಯೇ ಸೂಚ್ಯವಾಗಿ ನುಡಿದಿದ್ದ ಶ್ರೀಗಳ ಹೇಳಿಕೆ ಮೋದಿ ಪ್ರಧಾನಿಯಾದಾಗ ಸತ್ಯವಾಗಿದ್ದು ಸುಳ್ಳಲ್ಲ.
ಹೇಳಿಕೆ ನಂತರ ಪಂಚ ಭಕ್ತರಿಗೆ ಪ್ರಸಾದವನ್ನು ವಿತರಿಸಿದರು.
ಕಾಲಜ್ಞಾನ ಹೇಳಿಕೆಗೂ ಮುನ್ನ ಉದ್ಯಮಿ ಬಾಬುಗೌಡ ಬಿರಾದಾರ ಶ್ರೀಗಳ ಪಾದಪೂಜೆ ನೆರವೇರಿಸಿದರು. ಪಾದಪೂಜೆಯ ಮಾಡಿ ಮುಕ್ತಾದೆ… ಗುರು ಲಿಂಗ ಜಂಗಮರ ಪಾದ ಪೂಜೆಯ ಮಾಡಿ ಮುಕ್ತಾದೆ ಎಂಬ ಭಕ್ತಿಭಾವದ ಭಕ್ತಿಯ ಗೀತೆ ಎಲ್ಲೆಡೆ ಮಾರ್ದನಿಸಿತು. ಸಹಸ್ರಾರು ಭಕ್ತಾದಿಗಳು ಕಾಲಜ್ಞಾನ ಹೇಳಿಕೆ ಆಲಿಸಲು ನೆರೆದಿದ್ದರು. ಸೂಜಿ ಬಿದ್ದರೂ ಸಪ್ಪಳಾಗುವ ನಿಟ್ಟಿನಲ್ಲಿ ನಿಶ್ಯಬ್ದದ ವಾತಾವರಣ ನಿರ್ಮಾಣಗೊಂಡಿತು.
ಆದರೆ ಶ್ರೀಗಳ ಹೇಳಿಕೆಯನ್ನು ಅನೇಕರು ತಮ್ಮ ತಮ್ಮ ವಿವೇಚನೆಯ ಮೂಲಕ ವಿಶ್ಲೇಷಿಸಿಕೊಂಡು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, `ಶ್ರೀ ಶಿವಯ್ಯ ಮಹಾಸ್ವಾಮೀಜಿ ಅವರ ಹೇಳಿಕೆಗಳಲ್ಲಿ ದೊಡ್ಡ ಅರ್ಥ ಅಡಗಿರುತ್ತದೆ, ಅದನ್ನು ನಾವು ಅರ್ಥೈಸಿಕೊಳ್ಳಬೇಕು. ಈ ಹಿಂದೆ ಚಹಾ ಮಾರುವನು ಪ್ರಧಾನಿಯಾಗುತ್ತಾರೆ ಎಂದಾಗ ನಮಗೂ ಆಶ್ಚರ್ಯ. ಆದರೆ ಅದು ಸತ್ಯವಾಯಿತು. ಅನೇಕ ರಾಷ್ಟ್ರಗಳು ಭೂಪಟದಲ್ಲಿ ಮಾಯವಾಗುತ್ತವೆ ಎಂದಿದ್ದರು, ಉಕ್ರೇನ್ ಯುದ್ಧ, ಭೂಕಂಪನಗಳು ಹೀಗೆ ಎಲ್ಲ ನುಡಿಗಳು ಸತ್ಯವಾಗಿವೆ ಎಂದು ವಿಶ್ಲೇಷಿಸಿದರು.


