ಸಾಧಕರು ಯಾರೇ ಇರಲಿ ದಸರಾ ಉದ್ಘಾಟನೆ ವಿರೋಧಿಸುವುದು ಸರಿಯಲ್ಲ: ನಿಡುಮಾಮಿಡಿ ಶ್ರೀಗಳು

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 8:
ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರು ಯಾರೇ ಆಗಿದ್ದರೂ ಅವರು ಒಪ್ಪಿಕೊಂಡು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವುದಾದರೆ ಅದನ್ನು ಸ್ವೀಕಾರ ಮಾಡಬೇಕು. ವಿರೋಧ ಮಾಡಬಾರದು ಎಂದು ಚನ್ನಮಲ್ಲಿಕಾರ್ಜುನ ಶ್ರೀಗಳು ಪ್ರತಿಕ್ರಿಯೆ ನೀಡಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾನು ಮುಸ್ತಾಕ ಅವರು ದಸರಾ ಉತ್ಸವದ ಉಧ್ಘಾಟನೆ ಮಾಡುವುದು ತಪ್ಪೇನಿಲ್ಲ. ಹಿಂದು, ಮುಸ್ಲಿಂ, ಜೈನ್, ಬೌದ್ಧ ಯಾವುದೇ ಧರ್ಮದವರಿರಲಿ. ಸಾಧಕರು ಪಾಲ್ಗೊಳ್ಳುವುದು ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ವೀರಶೈವ ಲಿಂಗಾಯತ ಗೊಂದಲವನ್ನು ಮತದಾನದ ಮೂಲಕ ಬಗೆಹರಿಸಿಕೊಳ್ಳಬೇಕು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತದಾನ ಪ್ರಕ್ರಿಯೆ ನಡೆಸುವ ಮೂಲಕ ಪರಿಹಾರ ದೊರಕಿಸಬೇಕು. ಇದು ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದರು.
ಬಸವಣ್ಣನವರ ಸಾಮಾಜಿಕ, ಧಾರ್ಮಿಕ ಆದರ್ಶಗಳನ್ನು ಪಾಲನೆ ಮಾಡಿದರೆ ಅವರು ಮಹಾನ ಪುರುಷರಾಗುತ್ತಾರೆ. ಇದನ್ನು ಲಾಭಕ್ಕಾಗಿ, ರಾಜಕೀಯವಾಗಿ ಬಳಕೆ ಆಗುತ್ತಿರುವುದು ನೋವಿನ ಸಂಗತಿ ಎಂದರು.
ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಕೋಮುವಾದವನ್ನು ಹುಟ್ಟುಹಾಕಿದ್ದಾರೆ. ಕೋಮುವಾದಲ್ಲಿ ಹಿಂದೆ ಜನರು ಭಾಗವಹಿಸುತ್ತಿರಲಿಲ್ಲ. ರಾಜಕೀಯ ಪಕ್ಷಗಳು ಕೋಮುವಾದ ಸೃಷ್ಠಿಸಿ ಜನರನ್ನು ಭಾಗವಹಿಸಬೇಕು ಎಂಬ ವಾತಾವರಣ ಹುಟ್ಟು ಹಾಕಿವೆ. ಹಿಂದೂ ಕೋಮವಾದವಾಗಿರಲಿ, ಮುಸ್ಲಿಂ ಕೋಮುವಾದವಾಗಿರಲಿ ಇದನ್ನು ಮಾಡಬಾರದು. ಇದು ದೇಶಕ್ಕೆ ಮಾರಕ ಎಂದರು.
ಎಸ್.ಎಸ್. ಪಾಟೀಲ, ಆರ್. ಎಸ್. ಪಾಟೀಲ, ಪ್ರಭು ಬೆಳ್ಳಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share