ಸಪ್ತಸಾಗರ ವಾರ್ತೆ, ವಿಜಯಪುರ, ಅ. 24 :
ಸಂಘ ಪರಿವಾರ ಇಲ್ಲದೇ ಹೋದರೆ ಹಿಂದೂಗಳಿ ಉಳಿಗಾಲ ಇರುತ್ತಿರಲಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಅತ್ತ ಸಚಿವ ಡಾ.ಎಂ.ಬಿ. ಪಾಟೀಲ ಹಿಂದೂ ಸಮಾಜವನ್ನು ಒಡೆಯುವಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಾಡುವ ಕೆಲಸವನನ್ನು ಸಂಘ ಪರಿವಾರ ಮಾಡುತ್ತಿದೆ. ಸರ್ಕಾರಕ್ಕೆ ಏಕೆ ಈ ಸಂಘ ಪರಿವಾರದ ಮೇಲೆ ದ್ವೇಷ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರಿ ನೌಕರರು ಸಂಘ ಪರಿವಾರದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದರೆ ಏನರ್ಥ? ಕೋರ್ಟ್ ಸಹ ಸಂಘ ಪರಿವಾರ ರಾಜಕೀಯ ಸಂಘಟನೆ ಅಲ್ಲ ಎಂದು ಹೇಳಿದೆ. ಇದನ್ನು ಸಚಿವರು ಓದಿಲ್ಲವೇ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಹೇಳುವವರು ಕೇಳುವವರು ಯಾರು ಇಲ್ಲ. ಒಂದು ರೀತಿ ಅಪ್ಪ-ಅಮ್ಮ ಇಲ್ಲದ ಪಕ್ಷ, ಒಂದು ಕಡೆ ಮುಖ್ಯಮಂತ್ರಿ ಐದು ವರ್ಷ ನಾನೇ ಸಿಎಂ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಡಿ.ಕೆ. ಶಿವಕುಮಾರ ಅವರಿಗೆ ಸಿಎಂ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದು ಇನ್ನೊಬ್ಬರು ಹೇಳುತ್ತಾರೆ. ಆದರೆ ಡಿ.ಕೆ. ಶಿವಕುಮಾರ ಸುಮ್ಮನೆ ಕೂಡುವವರಲ್ಲ. ಅದು ಟುಕುಟುಕು ಮಾಡುತ್ತಲೇ ಇರುತ್ತದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲೂ ಪಕ್ಷ ಬೇಧ ಮಾಡುತ್ತಿದೆ, ಆಡಳಿತ ಪಕ್ಷದವರಿಗೆ ೫೦ ಕೋಟಿ ರೂ. ಅನುದಾನ ನೀಡಿದರೆ, ಪ್ರತಿಪಕ್ಷದವರಿಗೆ ೨೫ ಕೋಟಿ ರೂ. ನೀಡಿ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡುತ್ತಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ರಾಷ್ಟ್ರಪತಿ ಆಳ್ವಿಕೆ ಬರಬಹುದು ಅಥವಾ ಮಧ್ಯಂತರ ಚುನಾವಣೆ ಬರಬಹುದು ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ಕನ್ಹೇರಿ ಸ್ವಾಮಿಗಳು ನಮ್ಮೆಲ್ಲರಿಗೂ ಎಲ್ಲರಿಗೂ ದೇವರ ಸ್ವರೂಪ. ದೇವರು ಮಾಡದ, ಸರ್ಕಾರ ಮಾಡದ ಕೆಲಸ ಅವರು ಮಾಡಿದ್ದಾರೆ. ಸಾವಯವ ಕೃಷಿ ರಾಜ್ಯದಲ್ಲೇ ಮಾದರಿ ಕಾರ್ಯ ಮಾಡಿದ್ದಾರೆ. ಅಂತಹ ವ್ಯಕ್ತಿಗೆ ರಾಜ್ಯ ಸರ್ಕಾರ ವಿಜಯಪುರ, ಬಾಗಲಕೋಟೆ ಪ್ರವೇಶ ನಿರ್ಬಂಧ ಹಾಕಿದ್ದು ಕೋಟಿ ಕೋಟಿ ಹಿಂದೂಗಳಿಗೆ, ಭಕ್ತರಿಗೆ ನೋವಾಗಿದೆ. ಕೂಡಲೇ ಶ್ರೀಗಳ ಪ್ರವೇಶ ನಿರ್ಬಂಧ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಿಂದೂ ಸಮಾಜ ಒಂದುಗೂಡಿಸುವ ಸನ್ಯಾಸಿ ಅವರು, ಯಾರ ಮುಲಾಜಿಗೂ ಒಳಗಾಗಲ್ಲ. ಇಂತಹ ಸನ್ಯಾಸಿಗೆ ಅಗೌರವ ನೀಡುವ ದುಷ್ಟಬುದ್ಧಿ ಸರ್ಕಾರಕ್ಕೆ ಏಕೆ ಬಂದಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ಹೇರಿ ಶ್ರೀಗಳು ಒಂದೇ ಒಂದು ಕರೆ ಕೊಟ್ಟರೆ ರಾಜ್ಯದಲ್ಲಿಯೇ ಚಿತರ್ಣವೇ ಬೇರೆ ಆಗುತ್ತದೆ. ಈ ಸರ್ಕಾರದ ಅಂತಿಮ ಕ್ಷಣ ಆರಂಭವಾಗಿದೆ. ಕೂಡಲೇ ಶ್ರೀಗಳ ಮೇಲಿನ ಪ್ರವೇಶ ನಿಷೇಧ ಹಿಂದಕ್ಕೆ ಪಡೆಯಬೇಕು ಎಂದರು.
ಸಂಘ ಪರಿವಾರದ ಮೇಲೆ ಈ ಸರ್ಕಾರಕ್ಕೆ ದ್ವೇಷ ಯಾಕೆ?


