ರುದ್ರಪ್ಪ ಆಸಂಗಿ
ಸಪ್ತಸಾಗರ ವಾರ್ತೆ, ವಿಜಯಪುರ, ಜ. 7:
ನಾಡಿನ ದೊರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮೂರ್ತಿ ಅನಾವರಣ, ಕೇಂದ್ರ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರು ನಾಮಕರಣ ಹಾಗೂ ಸೈಕ್ಲಿಂಗ್ ವೆಲೋಡ್ರೋಮ ಉದ್ಘಾಟನೆ, ಪ್ರಜಾ ಸೌಧಕ್ಕೆ ಶಂಕು ಸ್ಥಾಪನೆ ನೆರವೇರಿಸುವ ಸಲುವಾಗಿ ಜ. 9ರಂದು ವಿಜಯಪುರಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಜಿಲ್ಲೆಗೆ ಏನಾದರೂ ವಿಶೇಷ ಕೊಡುಗೆ ನೀಡುವರೆ? ಎಂದು ಸಿಎಂ ಬರುವಿಕೆಗಾಗಿ ಜನರು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.
ಆಮೆ ವೇಗದ ನೀರಾವರಿ ಯೋಜನೆಗಳಿಗೆ ಚುರುಕು ಮೂಡುವುದೆ?
ವಿಜಯಪುರ ಜಿಲ್ಲೆಗೆ ಅಂಟಿಕೊಂಡಿರುವ ಬರದ ನಾಡು ಹಣೆಪಟ್ಟಿ ಇನ್ನೂ ಸಂಪೂರ್ಣವಾಗಿ ಅಳುಕಿಲ್ಲ. ಆಲಮಟ್ಟಿ ಅಣೆಕಟ್ಟೆಯಲ್ಲಿ ನೀರು ತುಂಬಿ ತುಳುಕುತ್ತಿದ್ದರೂ ಆಮೆ ವೇಗದ ನೀರಾವರಿ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಆಲಮಟ್ಟಿ ಅಣೆಕಟ್ಟಿ ಎತ್ತರವೂ ಇನ್ನೂ ನೆನೆಗುದಿಗೆ ಬಿದ್ದಿದೆ. ಯುಕೆಪಿ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ಈಗಲೂ ಮೀನ ಮೇಷ ಎನಿಸುತ್ತಿದೆ.
ನ್ಯಾಯಾಧಿಕರಣದ ಐತೀರ್ಪಿನಿಂದ ಲಭ್ಯವಾದ ಹೆಚ್ಚುವರಿ ನೀರಿನ ಸದ್ಭಳಕೆಯಾಗಿಲ್ಲ. ಹೆಚ್ಚುವರಿ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಬಬಲೇಶ್ವರ ಕ್ಷೇತ್ರದಲ್ಲಿ ಸಚಿವ ಎಂ.ಬಿ. ಪಾಟೀಲ ಅವರ ಇಚ್ಚಾಶಕ್ತಿಯಿಂದ ಇಡೀ ಕ್ಷೇತ್ರ ನೀರಾವರಿಗೆ ಒಳಪಟ್ಟು ರೈತರು ಹೆಚ್ಚು ಇಳುವರಿ ಪಡೆದು ಖುಷಿಯಿಂದ ಇದ್ದಾರೆ. ಇಡೀ ಜಿಲ್ಲೆಯಲ್ಲಿ ಸಮಗ್ರ ನೀರಾವರಿಗೆ ಒಳಪಡಬೇಕಿದೆ. ಆಯಾ ಕ್ಷೇತ್ರದ ಸಚಿವರು, ಶಾಸಕರು ಈ ನಿಟ್ಟಿನಲ್ಲಿ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ. ಆದಾಗ್ಯೂ ಬಬಲೇಶ್ವರ ಕ್ಷೇತ್ರದ ಶಾಸಕ ಎಂ. ಬಿ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರಿಂದ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಬೇರೆ ಹೇಳಬೇಕಿಲ್ಲ.
ಇನ್ನಾದರೂ ಸೇರುವುದೆ ಗೋಳಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ
ವಿಶ್ವ ವಿಖ್ಯಾತ ಗೋಳಗುಮ್ಮಟ ಐತಿಹಾಸಿಕ ಸ್ಮಾರಕ ವಿಶ್ವ ಪರಂಪರೆ ಪಟ್ಟಿಗೆ ಸೇರಬೇಕು ಎಂಬುವುದು ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆ. ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಇದು ಜನರ ಪಾಲಿಗೆ ಇನ್ನೂ ಕನಸಾಗಿಯೇ ಉಳಿದಿರುವುದು ದುರದೃಷ್ಟಕರವಾಗಿದೆ.
ವಿಜಯಪುರದಲ್ಲಿ ಇನ್ನಾದರೂ ಹಾರುವುದೆ ಉಕ್ಕಿನ ಹಕ್ಕಿ
ಜಿಲ್ಲೆಯಲ್ಲಿ ಉಕ್ಕಿನ ಹಕ್ಕಿ ಹಾರಾಟವೂ ಜನರ ಪಾಲಿಗೆ ಹಗಲುಗನಸಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಜನಪ್ರತಿನಿದಿನಗಳು ಉಕ್ಕಿನ ಹಕ್ಕಿ ಶೀಘ್ರದಲ್ಲಿ ಹಾರುತ್ತದೆ ಎಂದು ಕಾಂಗ್ರೆಸ್ ಬಿಜೆಪಿಯವರು ಜಿದ್ದಿಗೆ ಬಿದ್ದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ವಿಜಯಪುರ ವಿಮಾನ ನಿಲ್ದಾಣದ ಮೂಲಕ ಉಕ್ಕಿನ ಹಕ್ಕಿ ಹಾರುವುದು ಕನ್ನಡಿ ಒಳಗಿನ ಗಂಟಾಗಿದೆ. ಜನಪ್ರತಿನಿಧಿಗಳು ಇನ್ನಾದರೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವರೇ? ಎಂಬುವುದು ಜನರ ಪ್ರಶ್ನೆಯಾಗಿದೆ.
ಪ್ರವಾಸೋದ್ಯಮಕ್ಕೆ ಕಾಯಕಲ್ಪ ಯಾವಾಗ?
ವಿಜಯಪುರ ಜಿಲ್ಲೆ ಐತಿಹಾಸಿಕ ಸ್ಮಾರಕಗಳ ತವರು. ಆದಾಗ್ಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಇನ್ನೂ ಪ್ರಗತಿ ಕಂಡಿಲ್ಲ. ಪ್ರತಿ ಬಜೆಟ್ ನಲ್ಲಿಯೂ ಪ್ರವಾಸೋದ್ಯಮ ಬೆಳವಣಿಗೆಗೆ ಘೋಷಣೆ ಮಾಡಲಾಗುತ್ತದೆ. ಆದರೆ ಯೋಜನೆಗಳು ಸರಿಯಾಗಿ ಕಾರ್ಯಗತವಾಗುತ್ತಿಲ್ಲ. ಹೀಗಾಗಿ ಪ್ರವಾಸೋದ್ಯಮ ಇನ್ನೂ ಆಮೆ ಗತಿಯಲ್ಲಿಯೇ ಸಾಗಿದೆ.
ವಿಜಯಪುರ ನಗರವು ಮಹಾನಗರ ಪಾಲಿಕೆ ಹೊಂದಿದೆ. ಆದರೂ ನಗರ ಪ್ರದೇಶ ರಸ್ತೆಗಳನ್ನು ಹೊರತು ಪಡಿಸಿ ಒಳ ಚರಂಡಿ, ಕುಡಿಯುವ ನಲ್ಲಿ ನೀರು ಪೂರೈಕೆ ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಳ್ಳಬೇಕಿದೆ.
ಒಟ್ಟಿನಲ್ಲಿ ಜ. 9ರಂದು ವಿಜಯಪುರಕ್ಕೆ ಆಗಮಿಸಲಿರುವ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಪೋಷಿಸುವರೆ? ಎಂದು ಜನರು ಕುತೂಹಲದಿಂದ ನೋಡುತ್ತಿದ್ದಾರೆ.
ಜ. 9ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯಾದರೂ ಜಿಲ್ಲೆಗೆ ವಿಶೇಷ ಕೊಡುಗೆ ನೀಡಿ ಜಿಲ್ಲೆಯಲ್ಲಿ ಅಭಿವೃದ್ಧಿ ಶೆಕೆ ಆರಂಭಿಸುವರೆ? ಎಂದು ಕಾದು ನೋಡಬೇಕಿದೆ.


