ಆಮ್ ಆದ್ಮಿ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪೂರ ಸೇರಿ ಎಲ್ಲ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆದು ಬಿಡುಗಡೆಗೊಳಿಸಿ : ಎಎಪಿ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 5 : ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ಹೋರಾಟ ಸಮಿತಿ ಸದಸ್ಯ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಸೇರಿದಂತೆ ಆರು ಜನ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಅವರು ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಜಯಪುರ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ 106 ದಿನಗಳ ಕಾಲ ಶಾಂತಿಯುತ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿ ಅತಿ ಹಿಂದುಳಿದ ಹಾಗೂ ಎಲ್ಲ ರೀತಿಯ ಸೌಲಭ್ಯ ಹೊಂದಿರುವ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಬೇಕು ಹಾಗೂ ಸರ್ಕಾರದ ಉದ್ದೇಶಿತ ಖಾಸಗಿ (ಪಿಪಿಪಿ) ಮಾದರಿಯ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ನಡೆದ ಸತ್ಯಾಗ್ರಹವು ನ್ಯಾಯಯುತವಾಗಿದೆ. ಹೋರಾಟಕ್ಕೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರ ಮನೆಗಳ ಮುಂದೆ ಧರಣಿ ಹಮ್ಮಿಕೊಂಡು ಜಿಲ್ಲೆಗೆ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವಂತೆ ಆಗ್ರಹಿಸಲು ಹೋರಾಟಗಾರರು ಜನೇವರಿ 1 ರಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಮನೆಯ ಮುಂದೆ ಧರಣಿ ಹಮ್ಮಿಕೊಂಡಿದ್ದರು. ಹೋರಾಟವನ್ನು ಹತ್ತಿಕ್ಕುವಗೋಸ್ಕರ ದಾರಿ ಮಧ್ಯದಲ್ಲಿ ಹೋರಾಟಗಾರರನ್ನು ತಡೆದು ಅವರ ಮೇಲೆ ದೈಹಿಕ ಹಲ್ಲೆ ಮಾಡಿ ಬಂಧನಕ್ಕೊಳಪಡಿಸಿದ್ದು ಖಂಡನೀಯವಾಗಿದೆ. ಕೂಡಲೇ ಪೊಲೀಸರು ಬಂಧಿಸಿರುವ ನಮ್ಮ ಆಮ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪೂರ ಸೇರಿದಂತೆ 6 ಜನ ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು. ಉಳಿದ 21 ಜನ ಹೋರಾಟಗಾರರ ಮೇಲಿನ ಸುಳ್ಳು ಕೇಸ್‌ಗಳನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಇನ್ನೋರ್ವ ಮುಖಂಡರಾದ ಉತ್ತರ ಕರ್ನಾಟಕ ಉಸ್ತುವಾರಿ ಅರ್ಜುನ ಹಲಗಿಗೌಡರ ಮಾತನಾಡಿ, ರಾಜ್ಯ ಸರ್ಕಾರ ಮತ್ತು ವಿಜಯಪುರ ಜಿಲ್ಲಾಡಳಿತ ಜನಪರ ಹೋರಾಟವನ್ನು ಹತ್ತಿಕ್ಕುವಗೋಸ್ಕರ ಹೋರಾಟ ಟೆಂಟ್ ನ್ನು ರಾತ್ರೋ ರಾತ್ರಿ ತೆರವುಗೊಳಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದೆ. ಕೂಡಲೇ ತೆರವುಗೊಳಿಸಿದ ಟೆಂಟ್ ನ್ನು ಪುನಃ ಹಾಕಿಕೊಟ್ಟು ನ್ಯಾಯಯುತ ಹೋರಾಟ ಮಾಡಲು ಅವಕಾಶ ಮಾಡಿಕೊಡಬೇಕು. ಜೊತೆಗೆ ಹೋರಾಟ ಹತ್ತಿಕ್ಕಿದ ಪೊಲೀಸ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಆಮ್ ಆದ್ಮಿ ಪಕ್ಷದ ಮಾಧ್ಯಮ ವಕ್ತಾರ ಸಂಜೀವಕುಮಾರ ಶೆಟಗಾರ ಅವರು ಮಾತನಾಡಿ, ದೇಶದಲ್ಲಿ ಖಾಸಗೀಕರಣ ವ್ಯವಸ್ಥೆಯನ್ನು ರೂಪಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅದನ್ನು ಜಾರಿಗೊಳಿಸುತ್ತಿರುವುದು ಕಾಂಗ್ರೆಸ್ ಸರ್ಕಾರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದರು.
ಕೇಂದ್ರದಲ್ಲಿ ವಿಪಕ್ಷ ನಾಯಕ ಕಾಂಗ್ರೆಸ್ ನ ರಾಹಲ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಪಿಪಿಪಿಯನ್ನು ವಿರೋಧಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಅವರದ್ದೆ ಪಕ್ಷ ಪಿಪಿಪಿ ಜಾರಿಗೊಳಿಸಬೇಕೆಂದು ಹಠ ಹಿಡಿದು ಕುಳಿತಿರುವುದು ಕಾಂಗ್ರೆಸ್ ನ ಇಬ್ಬಗೆ ನೀತಿಯನ್ನು ಎತ್ತಿತೋರಿಸುತ್ತದೆ. ಇಂತಹ ಜನವಿರೋಧಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತರಾವ್, ವಿಜಯಶರ್ಮಾ, ಫರೀದ್ ನಧಾಪ್, ಶಬ್ಬೀರ ಪಟೇಲ, ರಮೇಶ ದೊಡ್ಡಮನಿ, ತಸ್ಮೀಯಾ ತಳೇವಾಡ, ಶಿವು ಕೋಳಾರಿ, ಪ್ರಕಾಶ ಸಬರದ, ಸೋಮು ಹಟ್ಟಿ ಸೇರಿದಂತೆ ಇನ್ನಿತರರು ಇದ್ದರು.

Share this