ಮನೆಯಲ್ಲಿ ಹಾಲೆರೆದ ನಾಗಠಾಣದ ಮಹಿಳೆಯರು

ಸಪ್ತಸಾಗರ ವಾರ್ತೆ, ವಿಜಯಪುರ, ಜು. 28:
ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆವಂತ ವಿಶೇಷ ಹಬ್ಬ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರಪಂಚಮಿ ಎಂದರೆ ಒಡಹುಟ್ಟಿದವರ ಹಬ್ಬ. ಹೆಣ್ಣು ಮಕ್ಕಳ ಹಬ್ಬ. ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ. ನಾಗ ದೇವನಿಗೆ ಹಲವು ವಿಧದ ಉಂಡೆಗಳು, ತಂಬಿಟ್ಟಿನ ನೈವೇದ್ಯವನ್ನು ಮಾಡಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಬಂಡೆ ಕುಟುಂಬದ ಭುವನೇಶ್ವರಿ, ಸುರೇಖಾ, ಅನುಶ್ರೀ, ಶ್ರೀನಿಧಿ ಅವರು ಮನೆಯಲ್ಲಿಯೇ ನಾಗದೇವನಿಗೆ ಹಾಲೆರೆದು ನಾಗರ ಪಂಚಮಿ ಆಚರಿಸಿದರು.
ಅಣ್ಣ ತಂಗಿಯ ಪ್ರೀತಿ ಸಾರುವಂತಹ ಈ ಹಬ್ಬದಲ್ಲಿ ಅಕ್ಕ ತಂಗಿಯರು ಅಣ್ಣ ತಮ್ಮಂದಿರ ಆಯಸ್ಸು, ಆರೋಗ್ಯ ಮತ್ತು ಸಕಲ ಸುಖಗಳನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ದಿನವಾಗಿದೆ. ಹುತ್ತಕ್ಕೆ ಹಾಲು ಎರೆದು, ಹುತ್ತದ ಮಣ್ಣನ್ನು ಹೊಕ್ಕಳು ಅಥವಾ ಬೆನ್ನಿಗೆ ಹಚ್ಚಿ ಒಳ್ಳೆದಾಗಲಿ ಎಂದು ಹಾರೈಸುತ್ತಾರೆ. ಹಿರಿಯರು ಕಿರಿಯರು ಭೇದವಿಲ್ಲದೇ ಜೋಕಾಲಿ ಆಡಿ ಸಂಭ್ರಮಿಸುತ್ತಾರೆ.
ನಾಗರ ಪಂಚಮಿಯಂದು ಹಾವುಗಳನ್ನು ಪೂಜಿಸುವುದರಿಂದ ಹಾವು ಕಡಿತದಿಂದ ರಕ್ಷಣೆ ಸಿಗುತ್ತದೆ ಮತ್ತು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ನಾಗರ ಪಂಚಮಿಯು ಧಾರ್ಮಿಕ ಮಹತ್ವದ ಜೊತೆಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿರುವ ಹಬ್ಬವಾಗಿದೆ. 

Share