ಸಪ್ತಸಾಗರ ವಾರ್ತೆ,ಬೆಂಗಳೂರು, ಆ. 8:
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಶೀಘ್ರದಲ್ಲೇ ಇತ್ಯರ್ಥವಾಗಲಿದ್ದು, ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡುವುದು ಖಚಿತ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ವಿಧಾನಸೌಧ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಇದ್ದೇ ಇರುತ್ತದೆ. ಮಹಿಳೆಯರಿಗೆ ಹೆಚ್ಚಿನ ಶಕ್ತಿ ನೀಡುತ್ತೇವೆ” ಎಂದರು.
ಮಹಿಳಾ ಮೀಸಲಾತಿ ವಿಚಾರವಾಗಿ ರಾಹುಲ್ ಗಾಂಧಿ ಅವರ ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ನೀಡಿರುವ ಪ್ರತಿಕ್ರಿಯೆ ಕುರಿತು ಕೇಳಿದಾಗ, “ಮಹಿಳಾ ಮೀಸಲಾತಿ ಮಸೂದೆಯನ್ನು ರೂಪಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ್ದು ಕಾಂಗ್ರೆಸ್. ಕರ್ನಾಟಕದಲ್ಲೂ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದ್ದೇವೆ. ಸಂಪುಟ ವಿಸ್ತರಣೆ ಶೀಘ್ರದಲ್ಲೇ ಬಗೆಹರಿಯಲಿದೆ. ರಿಜಿಜು ಅವರು ಕಾಂಗ್ರೆಸ್ ಬಗ್ಗೆ ಚಿಂತಿಸುವುದು ಬೇಡ; ತಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಆಲೋಚಿಸಲಿ” ಎಂದು ತಿರುಗೇಟು ನೀಡಿದರು.
ದೆಹಲಿಗೆ ತೆರಳುವ ಕುರಿತ ಪ್ರಶ್ನೆಗೆ, “ಹೋಗಲೇಬೇಕಲ್ಲವೇ. ನಿಮಗೆ ಮಾಹಿತಿ ನೀಡಿಯೇ ಹೋಗುತ್ತೇವೆ” ಎಂದು ಹೇಳಿದರು.
ನಿಜಲಿಂಗಪ್ಪ ಕರ್ನಾಟಕದ ಧೀಮಂತ ನಾಯಕ
ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರನ್ನು ಸ್ಮರಿಸಿದ ಶಿವಕುಮಾರ್, “ನಿಜಲಿಂಗಪ್ಪ ಅವರು ಕರ್ನಾಟಕಕ್ಕೆ ಗೌರವ ತಂದ ಧೀಮಂತ ನಾಯಕ. ಕರ್ನಾಟಕ ಏಕೀಕರಣಕ್ಕಾಗಿ ದೊಡ್ಡ ಹೋರಾಟ ನಡೆಸಿದ್ದರು. ಮಹಾತ್ಮ ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಂಡಿದ್ದ ಅವರು, ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಪ್ರಮುಖ ನಾಯಕರಾಗಿದ್ದರು” ಎಂದು ಬಣ್ಣಿಸಿದರು.
“ಅವರ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕನ್ನಡ ಹಾಗೂ ಕರ್ನಾಟಕದ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತಿದ ನಾಯಕ ನಿಜಲಿಂಗಪ್ಪ” ಎಂದರು.
ಸರಳತೆಯೇ ಅವರ ಆಸ್ತಿ
“ಸರಳತೆ ನಿಜಲಿಂಗಪ್ಪ ಅವರ ದೊಡ್ಡ ಆಸ್ತಿ. ಜಾತ್ಯತೀತ ತತ್ವ ಹಾಗೂ ಬಸವಣ್ಣನವರ ಚಿಂತನೆಗಳನ್ನು ಪ್ರತಿಬಿಂಬಿಸುವ ಆಡಳಿತ ನೀಡಿದ ಅವರು ಆದರ್ಶ ನಾಯಕರು. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು” ಎಂದು ಹೇಳಿದರು.
1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ನಿಜಲಿಂಗಪ್ಪ ಅವರ ಪಾತ್ರ ಮಹತ್ವದ್ದಾಗಿತ್ತು. ಭದ್ರಾ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೂ ಅವರು ಪ್ರಮುಖ ಕೊಡುಗೆ ನೀಡಿದ್ದರು ಎಂದು ಶಿವಕುಮಾರ್ ಸ್ಮರಿಸಿದರು.
“ಮುಖ್ಯಮಂತ್ರಿಯಾಗಿದ್ದರೂ ಅವರ ಪುತ್ರಿ ನಾನು ಓದಿದ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಅಷ್ಟೊಂದು ಸರಳ ಜೀವನ ನಡೆಸಿದವರು ಅವರು. ಅವರ ಮಾರ್ಗದರ್ಶನ ನಮಗೆ ಸದಾ ಅಗತ್ಯ” ಎಂದು ಹೇಳಿದರು.


