ವಿಜಯಪುರದಲ್ಲಿ ಮಹಿಳೆಯರ ಕಲರವ: ವೃಕ್ಷಥಾನ್ ಪ್ರೋಮೋ ರನ್‌ಗೆ ಭರ್ಜರಿ ಯಶಸ್ಸು

‘ಅವಳು ಓಡಿದರೆ ದಾರಿ ದೊಡ್ಡದು’ ಘೋಷಣೆಯೊಂದಿಗೆ ನೂರಾರು ಮಹಿಳೆಯರ ಉತ್ಸಾಹಭರಿತ ಓಟ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 6:
ನಗರದ ಗಗನ್ ಮಹಲ್ ಆವರಣದಲ್ಲಿ ರವಿವಾರ ಬೆಳಗ್ಗೆ ಮಹಿಳೆಯರ ಕಲರವ ಮೊಳಗಿತು. ಡಿ.13ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಪ್ರೋಮೋ ರನ್‌ಗೆ ನೂರಾರು ಮಹಿಳೆಯರು ಹಾಗೂ ಯುವತಿಯರು ಉತ್ಸಾಹದಿಂದ ಪಾಲ್ಗೊಂಡು ಭರ್ಜರಿ ಯಶಸ್ಸು ತಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಪತ್ನಿ, ಪ್ರಾಧ್ಯಾಪಕಿ ರಂಜಿತಾ ಕೆ.ಆರ್. ಹಾಗೂ ಖ್ಯಾತ ದಂತ ವೈದ್ಯೆ ಡಾ. ಸವಿತಾ ಕಲ್ಲೂರ ಅವರು ಗಗನ್ ಮಹಲ್‌ನಿಂದ ಮಹಿಳಾ ಪ್ರೋಮೋ ರನ್‌ಗೆ ಚಾಲನೆ ನೀಡಿದರು. ಓಟಗಾರರು ಗೋಲ್ ಗುಂಬಜ್‌ವರೆಗೆ ತೆರಳಿ, ಅಲ್ಲಿಂದ ಮತ್ತೆ ಗಗನ್ ಮಹಲ್‌ಗೆ ಮರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸವಿತಾ ಕಲ್ಲೂರ, ಮಹಿಳೆಯರು ಇಷ್ಟೊಂದು ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸ ತಂದಿದೆ. ವೃಕ್ಷಥಾನ್ ಹೆರಿಟೇಜ್ ರನ್ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಎಲ್ಲರೂ ಈಗಲೇ ನೋಂದಾಯಿಸಿಕೊಂಡು ಭಾಗವಹಿಸಬೇಕು ಎಂದು ಕರೆ ನೀಡಿದರು. ತಾವು ಹಿಂದಿನ ವೃಕ್ಷಥಾನ್‌ಗಳಲ್ಲೂ ಭಾಗವಹಿಸಿದ್ದು, ಈ ಬಾರಿಯ ರನ್‌ನಲ್ಲೂ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಪ್ರೋಮೋ ರನ್‌ಗೂ ಮುನ್ನ ಯೋಗಪಟು ಹಾಗೂ ಖ್ಯಾತ ಓಟಗಾರ ರೇಣುಕಾ ಪ್ರಸಾದ್ ಅವರು ಮಹಿಳೆಯರು ಮತ್ತು ಯುವತಿಯರಿಗೆ ಓಟದ ತರಬೇತಿ ನೀಡಿದರು. ವಿವಿಧ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿರುವ ತಮಗೆ ವೃಕ್ಷಥಾನ್‌ನ ಗುಣಮಟ್ಟ ಮತ್ತು ಶಿಸ್ತು ವಿಶೇಷವಾಗಿ ಕಂಡಿದೆ. ಡಿ.13ರ ರನ್‌ಗೆ ಇನ್ನೂ ಮೂರು ತಿಂಗಳಿದ್ದು, ಈ ಅವಧಿಯಲ್ಲಿ ಹೆಚ್ಚಿನ ದೂರ ಓಡಲು ಅಗತ್ಯವಿರುವ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಸಾವಿತ್ರಿ ಡವಳೇಶ್ವರ ಅವರ ಜುಂಬಾ ನೃತ್ಯ ಕಾರ್ಯಕ್ರಮ ಓಟಗಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಿತು. ಹೆರಿಟೇಜ್ ರನ್ ನೋಂದಣಿಗಾಗಿ ವಿಶೇಷ ಮಳಿಗೆಗಳನ್ನು ತೆರೆಯಲಾಗಿದ್ದು, ಸ್ಥಳದಲ್ಲೇ ನೋಂದಾಯಿಸಿಕೊಂಡವರಿಗೆ ಶೇ.10ರಷ್ಟು ರಿಯಾಯಿತಿ ನೀಡಲಾಯಿತು. ನೂರಾರು ಮಂದಿ ಹೆಸರು ನೋಂದಾಯಿಸಿಕೊಂಡರು. ಸೆಲ್ಫಿ ಸ್ಟ್ಯಾಂಡ್‌ಗಳಲ್ಲಿ ಮಹಿಳೆಯರು ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ನಗರ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳು ಸೇರಿದಂತೆ ಎಲ್ಲ ವರ್ಗದ ಮಹಿಳೆಯರು ಭಾಗವಹಿಸಿದ್ದರು. ಗೋಲ್ ಗುಂಬಜ್ ಪರಿಸರದಲ್ಲಿ ವಾದ್ಯಮೇಳಗಳ ಸದ್ದು, ಜುಂಬಾ ನೃತ್ಯ ಹಾಗೂ ಸಂಭ್ರಮದ ವಾತಾವರಣ ಓಟಗಾರರಿಗೆ ಮತ್ತಷ್ಟು ಚೈತನ್ಯ ನೀಡಿತು. ರಸ್ತೆ ಬದಿಯ ಜನರೂ ಚಪ್ಪಾಳೆ ತಟ್ಟಿ ಓಟಗಾರರನ್ನು ಹುರಿದುಂಬಿಸಿದರು.
‘ಅವಳು ಓಡಿದರೆ ದಾರಿ ದೊಡ್ಡದು’, ‘ಅವಳು ಇಡುವ ಹೆಜ್ಜೆ ಸಮಾಜಕ್ಕೆ ನೀಡುವ ಪರಿಸರದ ಸಂದೇಶ’ ಎಂಬ ಘೋಷಣೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಸ್ವಯಂಸೇವಕರು ಓಟಗಾರರಿಗೆ ಶಕ್ತಿವರ್ಧಕ ಪಾನೀಯ ಹಾಗೂ ಸಿಹಿ ವಿತರಿಸಿದರು.
ಈ ವೇಳೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ. ಸರೋಜಾ ಅಕ್ಕ ಅವರು ವ್ಯಸನಮುಕ್ತಿಯ ಪ್ರತಿಜ್ಞೆ ಬೋಧಿಸಿ ಧ್ಯಾನ ಮಾಡಿಸಿದರು. ಹಲವು ಬ್ರಹ್ಮಕುಮಾರಿಯರು ಹಾಗೂ ಹಿರಿಯ ಮಹಿಳೆಯರೂ ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು.
ಎಸ್ಪಿ ನಿಂಬರಗಿ ಅವರ ತಂದೆ ಬಸವರಾಜ ನಿಂಬರಗಿ ಹಾಗೂ ತಾಯಿ ಗುರುಬಾಯಿ ಅವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೃಕ್ಷಥಾನ್ ಕೋರ್ ಕಮಿಟಿ ಸದಸ್ಯರಾದ ಗುರುಶಾಂತ ಕಾಪಸೆ, ಚಂದ್ರಕಾಂತ ಶೆಟ್ಟಿ, ಅಶ್ಪಾಕ್ ಮನಗೂಳಿ, ಶಿವನಗೌಡ ಪಾಟೀಲ, ಸಂತೋಷ ಔರಸಂಗ, ವೀರೇಂದ್ರ ಗುಚ್ಚಟ್ಟಿ, ರಾಜು ಯಲಗೊಂಡ, ಡಾ. ಪ್ರವೀಣ ಸೇರಿದಂತೆ ಪ್ರೋಮೋ ರನ್ ಉಸ್ತುವಾರಿಗಳಾದ ಶಿವು ಕುಂಬಾರ, ಅಮಿತ್ ಬಿರಾದಾರ, ರಮೇಶ್ ಬಿರಾದಾರ ಹಾಗೂ ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಸಂಗೀತಾ ಮಠಪತಿ ಹಾಗೂ ಸುಭಾಶ್ಚಂದ್ರ ಕನ್ನೂರ ನಿರೂಪಿಸಿದರು.

Share this