ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 6:
ಜಿಲ್ಲೆಯಲ್ಲಿರುವ ಎಲ್ಲ ಗರ್ಭಿಣಿ ಮಹಿಳೆಯರ ಮಾಹಿತಿಯನ್ನು ಆರ್.ಸಿ.ಹೆಚ್. ತಂತ್ರಾಂಶದಲ್ಲಿ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ನೋಂದಣಿ ಮಾಡಬೇಕು ಹಾಗೂ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಸೂಚನೆ ನೀಡಿದರು.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ, ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯಾವುದೇ ಮಕ್ಕಳು ಪೊಲೀಯೋ ಸೇರಿದಂತೆ ವಿವಿಧ ರೋಗ ನಿರೋಧಕ ಲಸಿಕೆಗಳಿಂದ ವಂಚಿತವಾಗದಂತೆ ನೋಡಿಕೊಂಡು ಶೇ. ನೂರರಷ್ಟು ಪ್ರಗತಿ ಸಾಧಿಸುವಂತೆ ಅವರು ಸೂಚಿಸಿದರು.
ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳು ಒಂದೊಂದು ಗ್ರಾಮ ಪಂಚಾಯತಿಯನ್ನು ದತ್ತು ತೆಗೆದುಕೊಂಡು, ಆ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಓಳಪಡುವ ಹಳ್ಳಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಕ್ಷಯಮುಕ್ತ ಗ್ರಾಮ ಪಂಚಾಯತಿ ಮಾಡಲು ಹಾಗೂ ವಿವಿಧ ರಾಷ್ಟ್ರೀಯ ಆರೋಗ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅವರು ಸೂಚಿಸಿದ ಅವರು, ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಜನರಿಗೆ ಸೇವಾ ಮನೋಭಾವದಿಂದ ಸೇವೆಯನ್ನು ಒದಗಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತ್ ಗುಣಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಪಿ.ಎ.ಹಿಟ್ನಳ್ಳಿ, ಕಾರ್ಯಕ್ರಮ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಡಾ. ಜೆ.ಐ. ಕಟವಟೆ, ಡಾ. ಅಪ್ಪಾಸಾಹೇಬ ಇನಾಮದಾರ, ಡಾ. ಎಂ.ಬಿ. ಬಿರಾದಾರ, ಡಾ. ಅರ್ಚನಾ ಕುಲಕರ್ಣಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಗುಂಡಬಾವಡಿ ಕೆ.ಡಿ, ಡಾ.ಕವಿತಾ, ಡಾ.ಸತೀಶ ಭಗವಾನ ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಷ್ಟ್ರೀಯ ಆರೋಗ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಿ : ಜಿಪಂ ಸಿಇಒ ರಿಷಿ ಆನಂದ


