ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಿಶ್ವಪರಿಸರ ದಿನಾಚರಣೆ: ಸಸಿ ನೆಟ್ಟುಪರಿಸರ ಸಂರಕ್ಷಣೆಗೆ ವಿದ್ಯಾರ್ಥಿನಿಯರ ಸಂಕಲ್ಪ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 5:
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕೋಶದ
ವತಿಯಿಂದ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿನಿಯರು ಸ್ವಯಂಪ್ರೇರಿತರಾಗಿ
ಸಸಿಗಳನ್ನು ನೆಡುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ
ಬದ್ಧತೆಯನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಪರಿಸರ ಸಂರಕ್ಷಣೆಯ
ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಉದ್ಯಮಿ ಹಾಗೂ ಸಾಮಾಜಿಕ ಚಿಂತಕ
ಬಸಂತಕುಮಾರ ಪಾಟೀಲ, “ಪ್ರತಿಯೊಬ್ಬ ಪ್ರಜೆಯೂ ಒಂದೊಂದು
ಮರವನ್ನು ನೆಟ್ಟರೆ ನಮ್ಮ ದೇಶ ನಂದನವನದಂತೆ ಕಂಗೋಳಿಸುತ್ತದೆ.
ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಪರಿಸರ
ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸುವುದು
ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿನಿಯರು ಸಮಾಜಮುಖಿ
ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಎ. ಅಜೂರ್ ಮಾತನಾಡಿ, “ಸ್ವರ್ಗವನ್ನು ಬೇರೆ ಎಲ್ಲಿಯೂ ಹುಡುಕುವ ಅಗತ್ಯವಿಲ್ಲ. ನಾವು ವಾಸಿಸುವ
ಭೂಮಿಯನ್ನೇ ಹಚ್ಚ ಹಸಿರಿನ ಸ್ವರ್ಗವನ್ನಾಗಿ ರೂಪಿಸಬೇಕು. ಪರಿಸರ
ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ,
“ವಿಶ್ವವಿದ್ಯಾನಿಲಯ ಆವರಣವನ್ನು ಹಸಿರುಮಯಗೊಳಿಸುವಲ್ಲಿ ವಿದ್ಯಾರ್ಥಿನಿಯರ
ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಒಂದು ಸಸಿ ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು” ಎಂದು ಸಲಹೆ ಮಾಡಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್. ಲಕ್ಕಣ್ಣನವರ, ಶಿವಗಿರಿ ಸಂಸ್ಥೆಯ ವ್ಯವಸ್ಥಾಪಕಿ ಆರತಿ ಪಾಟೀಲ, ಕ್ಯಾಂಪಸ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರೊ. ಓಂಕಾರ ಕಾಕಡೆ, ಪ್ರೊ. ಮಹೇಶ ಚಿಂತಾಮಣಿ, ಪ್ರೊ.ಯು.ಕೆ. ಕುಲಕರ್ಣಿ,
ಪ್ರೊ. ಜ್ಯೋತಿ ಉಪಾಧ್ಯ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು ಸೇರಿದಂತೆ
ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ
ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎನ್‌ಎಸ್‌ಎಸ್ ಕೋಶದ ಸಂಯೋಜಕ ಡಾ.ಪ್ರಕಾಶ ಸಣ್ಣಕ್ಕನವರ
ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸವಿತಾ ಹಾಗೂ ಚಿಗರಿ
ಅತಿಥಿಗಳನ್ನು ಪರಿಚಯಿಸಿದರು. ಡಾ. ಗುಲಾಬ ರಾಠೋಡ ವಂದಿಸಿದರು.
ಡಾ.ಕಲಾವತಿ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು.

Share this