ಸಪ್ತಸಾಗರ ವಾರ್ತೆ , ಹುಬ್ಬಳ್ಳಿ, ಜೂ. 5: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹುಬ್ಬಳ್ಳಿ ರೈಲ್ವೆ ವಿಭಾಗವು ಶುಕ್ರವಾರ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಮತ್ತು ಆವರಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಬೇಲಾ ಮೀನಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (DRM), ನಿಲ್ದಾಣದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಕೇವಲ ಘೋಷಣೆ ಅಥವಾ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರ ಜೀವನದಲ್ಲಿ ಕಾರ್ಯರೂಪಕ್ಕೆ ಬರಬೇಕಾಗಿದೆ. ಹಸಿರು ಮತ್ತು ಸ್ವಚ್ಛ ಪರಿಸರ ನಿರ್ಮಾಣವು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಇದೆ ಸಂದರ್ಭದಲ್ಲಿ ರೈಲ್ವೆ ವರ್ಕ್‌ಶಾಪ್ ಕಾರ್ಮಿಕರಿಂದ ಪರಿಸರದ ಮಹತ್ವವನ್ನು ಸಾರುವ ಬೀದಿ ನಾಟಕವು ಎಲ್ಲರ ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆ ಹಾಗೂ ಆಕರ್ಷಕ ನೃತ್ಯ ಕಲಾ ಪ್ರದರ್ಶನವನ್ನು ನೀಡಿದರು. ಜೊತೆಗೆ ಪರಿಸರ ವಿಷಯದ ಕುರಿತು ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ DRM ಅವರು ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಜಾಗೃತಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಟಿ.ವಿ. ಭೂಷಣ ಹಾಗೂ ಶ್ರೀ ಪ್ರೇಮ ಚಂದ್ರ ಹರಿಜನ, ಹಿರಿಯ ವಿಭಾಗೀಯ ಪರಿಸರ ಮತ್ತು ಹೌಸ್ ಕೀಪಿಂಗ್ ವ್ಯವಸ್ಥಾಪಕರಾದ (EnHM) ಶ್ರೀ ಮೃಣಾಲ ಠಾಕೂರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯಾಪ್ತಿಯ ಧಾರವಾಡ, ಲೊಂಡಾ, ಖಾನಾಪುರ, ಬೆಳಗಾವಿ, ವಾಸ್ಕೋ-ದ-ಗಾಮಾ, ವಿಜಯಪುರ, ಬಳ್ಳಾರಿ ಸೇರಿದಂತೆ ಅನೇಕ ರೈಲು ನಿಲ್ದಾಣಗಳು ಹಾಗೂ ರೈಲ್ವೆ ಕಚೇರಿ ಆವರಣಗಳಲ್ಲಿ ಸಸಿ ನೆಡುವ, ಸ್ವಚ್ಛತಾ ಕಾರ್ಯಕ್ರಮಗಳು ಮತ್ತು ಪರಿಸರ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಹಲವು ದಿನಗಳಿಂದ ವಿಭಾಗದ್ಯಂತ ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯದ ಧ್ಯೇಯದಡಿ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳು, ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನಗಳು ಮತ್ತು ಸಸಿ ನೆಡುವ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, ಆ ಮೂಲಕ ಸಿಬ್ಬಂದಿ ಹಾಗೂ ರೈಲು ಪ್ರಯಾಣಿಕರಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತದೆ.
ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ: ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಡಿಆರ್‌ಎಂ ಬೇಲಾ ಮೀನಾ


