ಜಂತುಹುಳು ಬಾಧೆ: ಮಕ್ಕಳ ಬೆಳವಣಿಗೆಗೆ ಕಂಟಕ!

ಪೌಷ್ಟಿಕಾಂಶ ಕೊರತೆ, ರಕ್ತಹೀನತೆ ತಡೆಗೆ ಆರು ತಿಂಗಳಿಗೊಮ್ಮೆ ಮಾತ್ರೆ ಅಗತ್ಯ: ಡಾ. ಸಂಪತ್ ಗುಣಾರಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ.10:
ಜಂತುಹುಳು ಬಾಧೆಯಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ, ರಕ್ತಹೀನತೆ ಉಂಟಾಗುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯೂ ಕುಂಠಿತವಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಕ ಮಾತ್ರೆ ಸೇವಿಸುವುದು ಅಗತ್ಯ ಎಂದು ಉತ್ತರ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹಾಯಕ ನಿರ್ದೇಶಕ ಡಾ. ಸಂಪತ್ ಗುಣಾರಿ ಹೇಳಿದರು.
ವಿಜಯಪುರ ನಗರದ ಹಬೀಬ್‌ನಗರದಲ್ಲಿರುವ ಅಲ್ ಹಸ್ನಾತ್ ಉರ್ದು ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಗೆ ಮಕ್ಕಳಿಗೆ ಮಾತ್ರೆ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕರುಳಿನಲ್ಲಿರುವ ಜಂತುಹುಳುಗಳು ದೇಹದಲ್ಲಿನ ಆಹಾರ ಹಾಗೂ ಪೌಷ್ಟಿಕಾಂಶವನ್ನು ಹೀರಿಕೊಳ್ಳುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಇದರಿಂದ ಅವರ ದೈಹಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆ ಹಾಗೂ ಕಲಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ಬರಿಗಾಲಿನಲ್ಲಿ ಓಡಾಡುವುದು, ಬಯಲು ಶೌಚ, ಅಶುದ್ಧ ನೀರು, ಕಲುಷಿತ ಆಹಾರ ಸೇವನೆ ಹಾಗೂ ಸ್ವಚ್ಛತೆಯ ಕೊರತೆಯಿಂದ ಜಂತುಹುಳುಗಳು ದೇಹ ಪ್ರವೇಶಿಸುತ್ತವೆ. ಆದ್ದರಿಂದ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು, ಶುದ್ಧ ನೀರು ಕುಡಿಯುವುದು, ಸ್ವಚ್ಛ ಆಹಾರ ಸೇವಿಸುವುದು ಹಾಗೂ ಶೌಚಾಲಯ ಬಳಕೆಯಂತಹ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

1ರಿಂದ 19 ವರ್ಷದ ಮಕ್ಕಳಿಗೆ ಉಚಿತ ಮಾತ್ರೆ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತಿದ್ದು, 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದರು.
ಜಂತುಹುಳು ಬಾಧೆಯಿಂದ ಉಂಟಾಗುವ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಬೆಳವಣಿಗೆ ಕುಂಠಿತತೆಯನ್ನು ತಡೆಗಟ್ಟಲು ಮಕ್ಕಳು ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ಮಾತ್ರೆ ಸೇವಿಸಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷ ಶೆಟ್ಟಿ ಮಾತನಾಡಿ, ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಆ.10ರಂದು ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಲಾಗುತ್ತಿದೆ. ಶಾಲೆಯಿಂದ ಹೊರಗುಳಿದ ಹಾಗೂ ಶಾಲೆಗೆ ದಾಖಲಾಗದ ಮಕ್ಕಳಿಗೂ ಮಾತ್ರೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಆ.10ರಂದು ಮಾತ್ರೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಆ.17ರಂದು ನಡೆಯುವ ಮಾಪ್-ಅಪ್ ದಿನದಂದು ಮಾತ್ರೆ ನೀಡಲಾಗುವುದು. ಯಾವುದೇ ಅರ್ಹ ಮಗು ಮಾತ್ರೆಯಿಂದ ವಂಚಿತವಾಗದಂತೆ ಪಾಲಕರು ಹಾಗೂ ಶಿಕ್ಷಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ ಹಸ್ನಾತ್ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್. ಹರಿಯಾಲ ಅವರು ಜಂತುಹುಳು ಬಾಧೆಯ ಲಕ್ಷಣಗಳು ಹಾಗೂ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ. ಕೋಲೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಚಲವಾದಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮಹಾದೇವ ನಿಲಂಗಿ, ಆರ್‌ಕೆಎಸ್‌ಕೆ ಜಿಲ್ಲಾ ಸಂಯೋಜಕಿ ಸಾವಿತ್ರಿ ಹಿಪ್ಪರಗಿ, ಶಿಕ್ಷಕರಾದ ಸೌಮ್ಯ ಶಿಂಧೆ, ಜೀಯಾ ಅವಟಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

Share this