ನಂಜನಗೂಡು ಮಠದಲ್ಲಿ ಜಯತೀರ್ಥರ ಆರಾಧನೆ: ರಥೋತ್ಸವ, ವಿಶೇಷ ಪೂಜೆ

ಸಪ್ತಸಾಗರ ವಾರ್ತೆ,ವಿಜಯಪುರ,ಜು. 16:
ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ಜಯತೀರ್ಥರ ಆರಾ ಧನೆಯನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ತನ್ನಿಮಿತ್ತ ಬೆಳಿಗ್ಗೆ ಗುರುಸಾರ್ವಭೌಮರ ಅಷ್ಟೋತ್ತರ, ಸುಧಾ ಪಾರಾಯಣ, ಬಳಿಕ ವೃಂದಾವನಕ್ಕೆ ಫಲ ಪಂಚಾ ಮೃತ, ಅಲಂಕಾರ, ಮಹಾಪೂಜೆ ಜರುಗಿದವು. ಶ್ರೀ ಜಯತೀರ್ಥರ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ನಮಿಸಲಾಯಿತು. ಆನಂತರ ಶ್ರೀ ಮಠದ ಒಳಾವರಣದಲ್ಲಿ ಟೀಕಾರಾಯರ ರಚಿಸಿದ ಗ್ರಂಥಗಳನ್ನು ಹಾಗೂ ಭಾವಚಿತ್ರ ಪುಷ್ಪಗಳನ್ನಿಟ್ಟ ಅಲಂಕೃತ ರಥೋತ್ಸವ ಜರುಗಿತು. ರಥೋತ್ಸವ ಸಮಯದಲ್ಲಿ ದೇವರ ನಾಮಗಳ ಸುಮಧುರ ಕಂಠದ ಹಾಡುಗಳು ಭಕ್ತರ ಭಕ್ತಿಯ ಪರಾಕಾಷ್ಠೆ ಮಠದ ಆವರಣದಲ್ಲಿ ಮಾರ್ದನಿಗೊಂಡವು.
ಯುವ ಪಂಡಿತ ಡಾ. ಕೃಷ್ಣಾಚಾರ್ಯ ಕಾಖಂಡಕಿ ಪ್ರವಚನ ನೀಡುತ್ತ, ಜಯತೀರ್ಥ ಗುರುವರ್ಯರು ಮಾಧ್ವ ಸಾಹಿತ್ಯ ಪ್ರಪಂಚಕ್ಕೆ ಸೂರ್ಯನಂತೆ ಪ್ರಕಾಶಮಾನರಾಗಿ ಹೊಳೆಯುತ್ತಿರುವರು ಎಂದರಲ್ಲದೇ ಅವರ ನುಡಿಗಳು ನಮಗೆ ಕಾಮಧೇನು ಇದ್ದಂತೆ ಎಂದರು.
ಸನಾನತ ಹಿಂದು ಪರಂಪರೆಯ ಯತಿಶ್ರೇಷ್ಠರಲ್ಲಿ ಓರ್ವರು ಇವರಾಗಿದ್ದರು. ಅವರು ರಚಿಸಿದ ಗ್ರಂಥಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದರು.
ಜ್ಞಾನಭಕ್ತಿ ವೈರಾಗ್ಯವನ್ನು ಹೆಚ್ಚಿಸುವ ಮಾಸ ಆಷಾಢವಾಗಿದೆ ಎಂದರು.
ಬೆಳಿಗ್ಗೆಯಿಂದಲೇ ಅಸಂಖ್ಯಾತ ಭಕ್ತರು ಶ್ರೀಮಠಕ್ಕೆ ಆಗಮಿಸಿ ವೃಂದಾವನದ ದರ್ಶನ ಪಡೆದು ಪುನೀತರಾದರು. ವೃಂದಾವನವನ್ನು ಮಠದ ಅರ್ಚಕ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯ ವಿವಿಧ ಬಗೆಯ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಿದ್ದು ಗಮನ ಸೆಳೆಯಿತು.
ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ಕೆ. ಜಿ. ದೇಶಪಾಂಡೆ, ಕೃಷ್ಣ ಪಡಗಾನೂರ, ದಾಮೋದರಾಚಾರ್ಯ, ಬಂಡಾಚಾರ್ಯ ಜೋಶಿ( ಕೂಡಗಿ), ಪ್ರಕಾಶ ಬಿಜಾಪುರ, ವಿಜಯೀಂದ್ರ ಡಿ. ಜೋಶಿ, ಬಿ.ಜಿ. ಜೋಶಿ, ಡಾ. ಪವಮಾನ ಜೋಶಿ, ಪ್ರಾಣೇಶ ಪಾಟೀಲ, ಡಿ.ಆರ್. ನಾಡಿಗ, ಭೀಮಣ್ಣ ಕುಲಕರ್ಣಿ, ಸಂತೋಷ ಕುಲಕರ್ಣಿ( ಸತ್ತಿ) ಮುಂತಾದವರು ಉಪಸ್ಥಿತರಿದ್ದರು.

Share