ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 4: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ 2025-26ನೇ ಸಾಲಿನ ಗಡಿನಾಡು ಚೇತನ ಪ್ರಶಸ್ತಿಗೆ ವಿಜಯಪುರ ನಿವಾಸಿ ಗಡಿ ನಾಡು ಭಾಗದಲ್ಲಿ ಕನ್ನಡ ಸೇವೆ ಗೈದ ನಾಗೇಶ ಆರ್. ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಫ.ಗು.ಹಳಕಟ್ಟಿ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಗೆ ವಿಜಯಪುರದವರೇ ಆಯ್ಕೆಯಾಗಿರುವದು ವಿಶೇಷವಾಗಿದೆ.
ಪ್ರಶಸ್ತಿ ತಲಾ 1ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ, ಫಲ ತಾಂಬೂಲ ಒಳಗೊಂಡಿದೆ.
ಮಹಾರಾಷ್ಟ್ರ ಸರಕಾರದ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಎನ್.ಆರ್. ಕುಲಕರ್ಣಿಯವರು ಮೂಲತ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದವರು. ಇವರು ಹುಟ್ಟಿ ಬೆಳೆದು ಶಿಕ್ಷಣ ಪಡೆದದ್ದು ಕರ್ನಾಟಕದಲ್ಲಾದರೂ ಸಹ ಪ್ರೌಢ ಶಾಲೆ ಶಿಕ್ಷಕರಾಗಿ ನಂತರ ಪ್ರಾಂಶುಪಾಲರಾಗಿ ಮೂರೂವರೆ ದಶಕಗಳ ಕಾಲ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಾಗಣಸೂರ ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯದ ಧ್ವಜ ಹಾರಿಸಿ ಕೀರ್ತಿ ಬೆಳಗಿಸಿದ ಸಾಹಸ ಇವರದು.
75ರ ಈ ಇಳಿ ವಯಸ್ಸಿನಲ್ಲಿಯೂ ಸಹ ಇವರು ನಿವೃತ್ತಿ ಬಳಿಕ ಜನ್ಮ ಭೂಮಿ ವಿಜಯಪುರಕ್ಕೆ ಬಂದು ನೆಲೆಸಿ ಶೈಕ್ಷಣಿಕ ಸಾಹಿತ್ಯಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಎನ್. ಆರ್. ಕುಲಕರ್ಣಿಯವರಿಗೆ ವಿಜಯಪುರದ ಸಾಹಿತ್ಯಿಕ ಬಳಗ, ಸಿರಿಗನ್ನಡ ವೇದಿಕೆ, ಶ್ರೀ ಪ್ರಸನ್ನೇಶ್ವರ ಸೇವಾ ಸಮಿತಿ ಮೊದಲಾದ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.
ಗಡಿನಾಡು ಚೇತನ ಪ್ರಶಸ್ತಿಗೆ ಸಾಹಿತಿ ಎನ್.ಆರ್. ಕುಲಕರ್ಣಿ ಆಯ್ಕೆ


