ಯತ್ನಾಳ ಹೊಸ ಪಕ್ಷ ಸ್ಥಾಪನೆ ಇಂಗಿತ: ಬಿಜೆಪಿಯಲ್ಲಿ ಬೇಗುದಿ

ರುದ್ರಪ್ಪ ಆಸಂಗಿ
ಸಪ್ತಸಾಗರ ವಾರ್ತೆ,ವಿಜಯಪುರ, ಏ. 20:
ಬಿಜೆಪಿ ಉಚ್ಚಾಟಿತ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವುದಾಗಿ ಇಂಗಿತ ವ್ಯಕ್ತ ಪಡಿಸಿದ್ದಾರೆ.
ಈ ಹಿಂದೆಯೂ ಹೊಸ ಪಕ್ಷ ಕಟ್ಟುವುದಾಗಿಯೂ ಹೇಳಿದ್ದರು. ಇದೀಗ ಮತ್ತೆ ಹೊಸ ಪಕ್ಷ ಹುಟ್ಟು ಹಾಕುವ ಮನದ ಇಂಗಿತನ್ನು ಬಿಚ್ಚಿಟ್ಟಿದ್ದಾರೆ.
ಬಸವ ಜಯಂತಿ ಆಚರಣೆ ಶುಭ ಸಂದರ್ಭದಲ್ಲಿ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಯತ್ನಾಳ ಅವರು ಹೊಸ ಪಕ್ಷ ಕಟ್ಟುವ ವಿಚಾರ ಬಹಿರಂಗ ಪಡಿಸಿದ್ದಾರೆ.
ಯತ್ನಾಳ ಈ ಬಾರಿ ನೂತನ ಪಕ್ಷ ಕಟ್ಟುವ ವಿಚಾರದಲ್ಲಿ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಸಿದ್ಧರಾದಂತೆ ಕಾಣುತ್ತಿದೆ. ರಾಜ್ಯದಲ್ಲಿ ಬಿಜೆಪಿಗೆ ಅದರಲ್ಲೂ ವಿಶೇಷವಾಗಿ ವಿಜಯಪುರ ಜಿಲ್ಲೆಯ ಹಲವಾರು ಬಿಜೆಪಿ ನಾಯಕರು ಶಾಸಕ ಯತ್ನಾಳ ಅವರ ರಾಜಕೀಯ ಇಮೇಜ್ ಕಡಮೆ ಮಾಡಲು ದಿನಕ್ಕೊಂದು ಪತ್ರಿಕಾಗೋಷ್ಠಿ ನಡೆಸಿ ಹಿಗ್ಗಾಮುಗ್ಗಾ ನಿಂದಿಸುತ್ತಿದ್ದಾರೆ. ಆದರೆ ಯತ್ನಾಳ ವಿರೋಧಿಗಳ ಟೀಕೆ ಟಿಪ್ಪಣೆಗಳಿಗೆ ಎಂದೂ ಜಗ್ಗಿಲ್ಲ. ವಿರೋಧಿಗಳ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ. ಬಹುಶಃ ಶಾಸಕ ಯತ್ನಾಳ ಅವರು ವಿಜಯಪುರ ಜಿಲ್ಲೆಯ ಬಿಜೆಪಿಯಲ್ಲಿನ ವಿರೋಧಿ ಪಡೆಗಳಿಗೆ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಶಕ್ತಿ ಬಲ ಪ್ರದರ್ಶನಕ್ಕೆ ಈಗಲೇ ಅಖಾಢಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸುಳಿವನ್ನು ಯತ್ನಾಳ ನೀಡಿದ್ದಾರೆ. ಹೀಗಾಗಿಯೇ ಶಾಸಕ ಯತ್ನಾಳ ಹಿಂದುತ್ವದ ಅಸ್ತ್ರವನ್ನು ಝಳಪಿಸಲು ಮುಂದಾಗಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರಿಂದಾಗಿ ಬಿಜೆಪಿ ವಲಯದಲ್ಲಿ ಯತ್ನಾಳ ನಡೆ ನಡುಕ ಹುಟ್ಟಿಸಿದೆ ಎಂದರೆ ಅತಿಶಯೋಕ್ತಿ ಎನಿಸದು.
ಯತ್ನಾಳ ಜಿಲ್ಲಾವಾರು ಎಲ್ಲಾ ಹಿಂದೂಗಳ ಸಭೆ ನಡೆಸಲು ಸಜ್ಜಾಗಿದ್ದಾರೆ. ಬಿಜೆಪಿಗೆ ತನ್ನ ಶಕ್ತಿ ಎಂಥದು ಎಂಬುವುದನ್ನು ಪ್ರದರ್ಶನ ಮಾಡಲು ಯತ್ನಾಳ ಕಣ ಸಜ್ಜು ಮಾಡಿಕೊಳ್ಳಲು ಮುಂದಾಗಿರುವುದು ಹೊಸ ಪಕ್ಷ ಸ್ಥಾಪನೆ ಮಂತ್ರ ಮತ್ತೆ ಜಪಿಸುತ್ತಿರುವುದರಿಂದಲೇ ಸ್ಪಷ್ಟವಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ.
ಯತ್ನಾಳ ಅವರು ಕೋಲಾರ ಜಿಲ್ಲೆಯ ವಿಘ್ನೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡುತ್ತೇನೆ. ಇಡೀ ರಾಜ್ಯದ ಪ್ರವಾಸ ಮಾಡುತ್ತೇನೆ. ಹಿಂದೂತ್ವ, ಉದ್ಯೋಗ ಹಾಗೂ ಅಭಿವೃದ್ಧಿ ಮೂರು ಉದ್ದೇಶಗಳಿವೆ. ಕರ್ನಾಟಕದಲ್ಲಿ
ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಆರಂಭ ಮಾಡಿದ್ದೇನೆ. ಮೇ ತಿಂಗಳಲ್ಲಿ ಒಳ್ಳೆಯ ದಿನದಂದು ಕೆಲಸ ಆರಂಭ ಮಾಡುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಎಲ್ಲಾ ಜಿಲ್ಲಾ ತಾಲೂಕಾ ಕೇಂದ್ರಕ್ಕೆ ಭೇಟಿ ನೀಡುವೆ. ಹಿಂದೂ ಪರ ಸಂಘಟನೆಗಳ, ನಿರುದ್ಯೋಗಿ ಯುವಕರ ಭೇಟಿ ಮಾಡುವೆ ಎಂದು ಹೇಳಿದ್ದಾರೆ.
ಮರಳಿ ಬಿಜೆಪಿಗೆ ಹೋಗುವ ವಿಚಾರ ಸದ್ಯಕ್ಕಂತೂ ಇಲ್ಲ ಎಂಬುದನ್ನು ಅವರ ನಡೆಯೇ ತೋರಿಸಿಕೊಡುತ್ತಿದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳ ಹೊಸ ಪಕ್ಷದ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುವ ತನಕ ಬಿಜೆಪಿ ಸೇರುವ ಬಗ್ಗೆ ವಿಚಾರ ಮಾಡುವ ಮನಃಸ್ಥಿತಿಯಲ್ಲಿ ಇಲ್ಲ ಎನ್ನಬಹುದು.
ಹೊಸ ಪಕ್ಷಕ್ಕೆ ಜೆಸಿಬಿ ಅಥವಾ ಬುಲ್ಡೋಜರ್ ಚಿನ್ಹೆ ಪಡೆಯುತ್ತೀರಾ? ಎಂಬ ಪ್ರಶ್ನೆಗೆ ನಯವಾಗಿ ಉತ್ತರಿಸಿದ ಯತ್ನಾಳ ಅವರು, ಚುನಾವಣೆ ಆಯೋಗ ಏನು ನೀಡುತ್ತೋ ನೋಡೋಣವೆಂದು ಹೇಳಿದ್ದಾರೆ. ಈ ಮಾತಿನ ಮೇಲೆ ಯತ್ನಾಳ ಅವರು ಹೊಸ ಪಕ್ಷ ಕಟ್ಟುವುದು ಪಕ್ಕಾ ಎಂಬಂತಾಗಿದೆ.
ಇಡೀ ರಾಜ್ಯದಲ್ಲಿ ಮೊದಲು ಎಲ್ಲರ ಅಭಿಪ್ರಾಯ ಪಡೆಯುವೆ.
ನಂತರ ಏನು ಮಾಡಬೇಕೆಂದು ತೀರ್ಮಾನ ಮಾಡುವೆ ಎಂದು ಹೇಳುವ ಮೂಲಕ ಪಕ್ಷ ಕಟ್ಟುವ ಬಗ್ಗೆ ಗಟ್ಟಿ ನಿಲುವು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಯತ್ನಾಳ ಅವರ ಈ ನಿಲುವಿನಿಂದ ಬಿಜೆಪಿ ವಲಯದಲ್ಲಿ ಆತಂಕ, ದುಗುಡ ಮನೆ ಮಾಡುವುದಂತೂ ಸುಳ್ಳಲ್ಲ.

Share this