ಸಪ್ತಸಾಗರ ವಾರ್ತೆ ವಿಜಯಪುರ, ಸೆ. 19: ಡಾ.ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳದ ಅನೇಕರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಹೆಸರನ್ನು ಬಳಸುತ್ತಿದ್ದಾರೆ. ಆದರೆ, ಯತ್ನಾಳರು ಅಂಬೇಡ್ಕರ್ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ, ಅವರ ಜೀವನ ಚರಿತ್ರೆ, ದೇಶಕ್ಕೆ ನೀಡಿದ ಕೊಡುಗೆ, ಅವರ ಜೀವನದಲ್ಲಾದ ಅನ್ಯಾಯ ಬಗ್ಗೆ ವಿವರಿಸಿದಲ್ಲದೆ, ತಾವು ಅಂಬೇಡ್ಕರ್ ಅವರ ಅನುಯಾಯಿ ಎಂದು ಸದನದಲ್ಲೇ ಘೋಷಿಸಿದ್ದಾರೆ. ಅವರ ಏಳಿಗೆ ಸಹಿಸದೆ ಅಪಪ್ರಚಾರ ಮಾಡುತ್ತಿರುವುದಕ್ಕೆ ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ವಿಡಿಎ ಮಾಜಿ ಸದಸ್ಯ ಮಡಿವಾಳ ಯಾಳವಾರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಚೆಗೆ ಮೈಸೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ, ಬಸನಗೌಡ ಪಾಟೀಲ ಯತ್ನಾಳ ಅವರು ದಸರಾ ಉದ್ಘಾಟನೆಗೆ ಸಾಮಾನ್ಯ ದಲಿತರಿಗೂ ಅವಕಾಶವಿದೆ. ಆದರೆ, ಭಾನು ಮುಸ್ತಾಕ್ ಅವರಿಗೆ ಇಲ್ಲವೆಂದು ಹೇಳಿರುವುದನ್ನು ತಿರುಚಿ ಸಾಮಾನ್ಯ ದಲಿತರಿಗಿಲ್ಲ ಎಂದು ಹೇಳಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿ, ಸುಖಾಸುಮ್ಮನೆ ಗೊಂದಲ ಸೃಷ್ಟಿಸಿ ಬಸನಗೌಡರ ಹೆಸರನ್ನು ಕೆಡಿಸುವ ಹುನ್ನಾರ ಸರಿಯಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದಾ ಪರಿಶಿಷ್ಟ ಸಮುದಾಯದ ಏಳಿಗೆ ಬಯಸುವ ಯತ್ನಾಳ ಅವರು, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹೊಸ ಸುಂದರ ಮೂರ್ತಿಯನ್ನು ನಿರ್ಮಿಸಿದ್ದಾರೆ. ನಗರ ಹೃದಯ ಭಾಗದ ಸ್ಟೇಶನ್ ರಸ್ತೆಗೆ ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡಿದ್ದಾರೆ. ಸಾಕಷ್ಟು ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಿದ್ದಾರೆ. ದೀಪಾವಳಿ ಹಬ್ಬದಲ್ಲಿ ಸುಮಾರು 3 ಸಾವಿರ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಕಿಟ್ ವಿತರಿಸಿದ್ದಾರೆ. ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗೆಯನ್ನು ವಕ್ಪ್ ಪಾಲಾಗುವುದನ್ನು ತಪ್ಪಿಸಿದ್ದಾರೆ. ಇದರಿಂದಲೇ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಅಂಬೇಡ್ಕರ್ ಅವರ ಮೇಲಿರುವ ಗೌರವ ಮತ್ತು ದಲಿತರ ಮೇಲಿನ ಕಾಳಜಿ ಅವರ ಹೃದಯದಲ್ಲಿದೆ ಎಂಬುವುದು ತಿಳಿಯುತ್ತದೆ. ವಾಸ್ತವ ಹೀಗಿರುವಾಗ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದೆಂದು ಎಂದು ಕಿವಿಮಾತು ಹೇಳಿದ್ದಾರೆ.
ಯತ್ನಾಳರು ಅಂಬೇಡ್ಕರ್ ಅನುಯಾಯಿ: ಅಪಪ್ರಚಾರ ಖಂಡನೀಯ-ಯಾಳವಾರ
