ಸಪ್ತಸಾಗರ ವಾರ್ತೆ,ವಿಜಯಪುರ, ಆ. 4: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದು, ಹೊಸ ಸಚಿವರ ಪಟ್ಟಿಯನ್ನು “ಗೂಂಡಾ ಸರ್ಕಾರದ ಸಂಪುಟ” ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದವರು, ಗೂಂಡಾಗಿರಿ ಪ್ರವೃತ್ತಿಯವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿರುವ ಅವರು, ನಿಷ್ಠಾವಂತ ಕಾಂಗ್ರೆಸ್ ನಾಯಕರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಉತ್ತಮ ಸಚಿವ ಸಂಪುಟ ರಚಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಕೆಲ ಸಚಿವರಿಗೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗದಿರುವುದು ಸರ್ಕಾರದ ಗುಣಮಟ್ಟವನ್ನೇ ಬಿಂಬಿಸುತ್ತದೆ ಎಂದರು.
ವಿಜಯಪುರ ಜಿಲ್ಲೆಯ ಅಪ್ಪಾಜಿ ನಾಡಗೌಡ ಹಾಗೂ ಯಶವಂತರಾಯಗೌಡ ಪಾಟೀಲ್ ಅವರಂತಹ ಹಿರಿಯ ನಾಯಕರಿಗೆ ಅವಕಾಶ ನಿರಾಕರಿಸಿ, ಬಿಜೆಪಿ ಹಾಗೂ ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದವರಿಗೆ ಸಚಿವ ಸ್ಥಾನ ನೀಡಿರುವುದು ನಿಷ್ಠಾವಂತರಿಗೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು.
ರಾಜೀನಾಮೆ ಪರ್ವದ ಕುರಿತು ಪ್ರತಿಕ್ರಿಯಿಸಿದ ಅವರು, “ಇದು ಕೇವಲ ರಾಜಕೀಯ ಒತ್ತಡದ ನಾಟಕ. ಸಭಾಪತಿಗೆ ರಾಜೀನಾಮೆ ನೀಡಿ ಅದು ಅಂಗೀಕಾರವಾದಾಗ ಮಾತ್ರ ಅದನ್ನು ನಿಜವಾದ ಪ್ರತಿಭಟನೆ ಎಂದು ಕರೆಯಬಹುದು” ಎಂದರು.
ಹೊಸ ಸಚಿವರ ಆಯ್ಕೆಯೇ ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂಬ ಭವಿಷ್ಯವನ್ನೂ ನುಡಿದರು.
‘ಎಂ.ಬಿ. ಪ್ರಭಾವಕ್ಕೆ ಡಿಕೆಶಿಯೇ ಬ್ರೇಕ್?’
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಂದಲೇ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ, “ಎಂ.ಬಿ. ಪಾಟೀಲ್ ಹೆಚ್ಚು ಪ್ರಭಾವಿಯಾಗಬಾರದು ಎಂಬ ಕಾರಣಕ್ಕೆ ಈ ಬೆಳವಣಿಗೆಗಳು ನಡೆದಿರಬಹುದು. ಇದರ ಹಿಂದಿನ ತಂತ್ರ ಡಿ.ಕೆ. ಶಿವಕುಮಾರ್ ಅವರದ್ದೇ ಇರಬಹುದು” ಎಂದು ಹೇಳಿದರು.
ಯಶವಂತರಾಯಗೌಡ ಪಾಟೀಲ್ ಅವರ ‘ವಾರ್ ಡಿಕ್ಲೇರ್’ ಹೇಳಿಕೆಯನ್ನು ಲೇವಡಿ ಮಾಡಿದ ಅವರು, “ಇದು ಇಂಡಿಯಾ–ಪಾಕಿಸ್ತಾನ ಯುದ್ಧವಲ್ಲ. ಶಾಸಕರು ಪರಸ್ಪರ ಯುದ್ಧ ಮಾಡುವ ಪ್ರಶ್ನೆಯೇ ಇಲ್ಲ. ಅಂತಿಮ ತೀರ್ಪು ಜನರದ್ದು” ಎಂದರು.
ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲ್ ಹಾಗೂ ತಮ್ಮದೇ ಪಕ್ಷದ ಕೆಲವರು ಪ್ರಯತ್ನಿಸಿದ್ದರು. ಆದರೂ ಜನರ ಆಶೀರ್ವಾದದಿಂದ ಗೆದ್ದಿದ್ದೇನೆ. ಯಾರನ್ನು ಗೆಲ್ಲಿಸಬೇಕು, ಸೋಲಿಸಬೇಕು ಎಂಬುದನ್ನು ಮತದಾರರೇ ನಿರ್ಧರಿಸುತ್ತಾರೆ ಎಂದು ಹೇಳಿದರು.
ಸದ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ಒತ್ತಡದ ಭಾಗ ಮಾತ್ರ. ಕೆಲವೇ ದಿನಗಳಲ್ಲಿ ಎಂ.ಬಿ. ಪಾಟೀಲ್ ಮತ್ತು ಯಶವಂತರಾಯಗೌಡ ಪಾಟೀಲ್ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಯತ್ನಾಳ ವ್ಯಂಗ್ಯವಾಡಿದರು.


