ಸಪ್ತಸಾಗರ ವಾರ್ತೆ,ವಿಜಯಪುರ, ಜು. 5: ನಗರದ ಚಪ್ಪರಬಂದ್ ಗಲ್ಲಿಯಲ್ಲಿ 36 ವರ್ಷದ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಮೃತನನ್ನು ಉಮರಸಾಬ್ ಪಟೇಲ್ (36) ಎಂದು ಗುರುತಿಸಲಾಗಿದೆ. ಆರೋಪಿಗಳು ಕಬ್ಬಿಣದ ರಾಡ್ ಹಾಗೂ ಸ್ಕ್ರೂ (ಚೂಪಾದ ಕಬ್ಬಿಣದ ವಸ್ತು) ಬಳಸಿ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ.
ಉಮರಸಾಬ್ ಶನಿವಾರ ರಾತ್ರಿ ತನ್ನ ಕೆಲ ಗೆಳೆಯರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ. ಇದೇ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಜಗಳಕ್ಕೆ ತಿರುಗಿದ್ದು, ಆ ಜಗಳವೇ ಹತ್ಯೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಗೋಲಗುಂಬಜ್ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಹತ್ಯೆಗೆ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆಯ ನಂತರವೇ ಸ್ಪಷ್ಟವಾಗಬೇಕಿದೆ.
Editor
Rudrappa B Asangi
Editor
Managing Editor
Chetan Asangi
Managing Editor


