ಸರ್ಕಾರಿ ಉದ್ಯೋಗಗಳನ್ನು ತಕ್ಷಣ ಭರ್ತಿ ಮಾಡಿಬೇಕೆಂದು ಸರ್ಕಾರದ ವಿರುದ್ಧ ಡಿವಿಪಿಯಿಂದ ಯುವ ಜನಾಕ್ರೋಶ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 30:
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು, ಉದ್ಯೋಗದ ವಯೋಮಿತಿಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಮಂಗಳವಾರ ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಡಿ.ವಿ.ಪಿ ಸಂಘಟನೆಯ ರಾಜ್ಯಧ್ಯಕ್ಷ ಶ್ರೀನಾಥ ಪೂಜಾರಿ ಅವರು ಮಾತನಾಡಿ, ನಾಡಿನಾದ್ಯಂತ ವಿದ್ಯಾರ್ಥಿ ಯುವಜನರ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಆಗಿರಬಹುದು ಇವತ್ತಿನ ಕಾಂಗ್ರೆಸ್ ಸರ್ಕಾರ ಆಗಿರಬಹುದು. ನಾಲ್ಕು ವರ್ಷದಿಂದ ಯಾವುದೇ ಸರ್ಕಾರಿ ಹುದ್ದೆಗಳನ್ನು ತುಂಬದೇ ಸತಾಯಿಸುತ್ತಿರುವುದು ಖಂಡನಿಯ. ವಿದ್ಯಾರ್ಥಿ ಯುವ ಜನರು ನೌಕರಿ ಪಡೆಯಬೇಕೆನ್ನುವ ಉದ್ದೇಶದಿಂದ ಹಗಲು ರಾತ್ರಿ ಕಷ್ಟಪಟ್ಟು ಶ್ರಮ ಪಡುತ್ತಿದ್ದಾರೆ. ಆದರೆ ಸರ್ಕಾರ ಅವರ ಕಷ್ಟಕ್ಕೆ ಪ್ರತಿಫಲವಾಗಿ ಉದ್ಯೋಗ ನೀಡದೆ ಅವರ ಜೀವನವನ್ನು ಹಾಳು ಮಾಡುತ್ತಿರುವುದು ಅತಿ ಖೇದಕರ ಸಂಗತಿ ಎಂದರು.
ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮನಿ ಮಾತನಾಡಿ, ದಲಿತ ವಿದ್ಯಾರ್ಥಿ ಪರಿಷತ್ ನಿರುದ್ಯೋಗಿ ಯುವಕರ ಪರವಾಗಿ ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದೆ. ಆದರೆ ನಮ್ಮನ್ನಾಳುವ ಸರ್ಕಾರಗಳು ನಮ್ಮ ಕಷ್ಟಗಳನ್ನು ಅರ್ಥಮಾಡಿಕೊಳ್ಳದೆ ಇವತ್ತು ಬೀದಿಯಲ್ಲಿ ನಿಲ್ಲಿಸುವ ರೀತಿಯಲ್ಲಿ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.
ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಅವಕಾಶಗಳು ಮತ್ತು ಉದ್ಯೋಗದ ಅವಕಾಶಗಳು ದೊರೆಯಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ಅದನ್ನು ಯಾವುದೂ ಪಾಲನೆ ಮಾಡದೆ ವಿದ್ಯಾರ್ಥಿ ಯುವ ಜನರ ಬಾಳಿಗೆ ಕುತ್ತು ತರುವಂತಹ ಕೆಲಸ ಇವತ್ತಿನ ಸರ್ಕಾರಗಳು ಮಾಡುತ್ತಿವೆ. ಅದಕ್ಕಾಗಿ ನಾವು ಇಡೀ ರಾಜ್ಯಾದ್ಯಂತ ಉದ್ಯೋಗ ಆಕಾಂಕ್ಷಿ ಯುವಕರ ಪರವಾಗಿ ಧ್ವನಿ ಎತ್ತಿದ್ದೇವೆ. ಅವರಿಗೆ ನ್ಯಾಯ ಸಿಗುವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ರಾಜ್ಯದ ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಇನ್ನೂ ಒಂದು ವಾರದಲ್ಲಿ ನೋಟಿಫಿಕೇಶನ್ ಮಾಡಬೇಕು. ನಾಲ್ಕು ವರ್ಷದಿಂದ ಸರ್ಕಾರಿ ಹುದ್ದೆಯನ್ನು ಭರ್ತಿ ಮಾಡದ ಕಾರಣಕ್ಕಾಗಿ ಎಷ್ಟೋ ವಿದ್ಯಾರ್ಥಿಗಳ ವಯಸ್ಸು ಮೀರಿದೆ. ಅಂಥವರಿಗೆ ೩೫ ವರ್ಷದ ತನಕ ವಯೋಮಿತಿಯನ್ನು ಹೆಚ್ಚಿಸಬೇಕು. ಸರ್ಕಾರಿ ಉದ್ಯೋಗದ ಅನುಮೋದನೆಯಲ್ಲಿ ಸ್ಪಷ್ಟವಾಗಿ ಸಮಯದ ಸ್ಪಷ್ಟತೆಯನ್ನು ನಿಗದಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ವಿದ್ಯಾರ್ಥಿಗಳ ಮನವೊಲಿಸಿ ಹೋರಾಟದ ವಾತಾವರಣವನ್ನು ತಿಳಿಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಮುಖಂಡರಾದ ಹುಚ್ಚಪ್ಪ ಸಿಂದಗಿ, ಮಂಜುನಾಥ್, ವಿದ್ಯಾರ್ಥಿ ಪರಿಷತ್ ಉಪಾಧ್ಯಕ್ಷ ಮಾದೇಶ್ ಚಲವಾದಿ, ಪ್ರತಾಪ ತೋಳನೂರ, ಪ್ರಶಾಂತ ದಾಂಡೇಕರ, ರಾಹುಲ್ ಕಳಸದ, ಯಮನೂರಿ ಮಾದರ, ಭೀಮು, ಮಂಜುನಾಥ್, ಶಿಲ್ಪಾ ಮುಂತಾದವರು ಮತ್ತು ನಾಡಿನ ವಿದ್ಯಾರ್ಥಿ ಯುವಜನರು ಭಾಗಿಯಾಗಿದ್ದರು.

Share this