ಗಾಂಧೀಜಿ–ಶಾಸ್ತ್ರಿ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಲಿ: ಡಾ. ಅರುಣ್ ಇನಾಮದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 2:
ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 122ನೇ ಜನ್ಮದಿನಾಚರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಪತಿ ಡಾ. ಅರುಣ್ ಸಿ. ಇನಾಮದಾರ ಅವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳು ಭಾರತಕ್ಕೆ ಮಾತ್ರವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಈ ಮೌಲ್ಯಗಳನ್ನು ದೈನಂದಿನ ಹಾಗೂ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್, ಜೈ ಕಿಸಾನ್’ ಘೋಷವಾಕ್ಯವು ದೇಶದ ಸೈನಿಕರು ಹಾಗೂ ರೈತರ ಮಹತ್ವವನ್ನು ಸಾರುತ್ತದೆ. ಗಾಂಧೀಜಿ ಮತ್ತು ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ, ದೇಶಭಕ್ತಿ ಹಾಗೂ ಸೇವಾ ಮನೋಭಾವವನ್ನು ಯುವಜನತೆ ಆದರ್ಶವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ್ ಮಾತನಾಡಿ, ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆ ಹಾಗೂ ಸೇವಾ ಮನೋಭಾವ ಮತ್ತು ಶಾಸ್ತ್ರಿಯವರ ಪ್ರಾಮಾಣಿಕತೆ, ಶಿಸ್ತು ಹಾಗೂ ದೇಶಭಕ್ತಿ ಎಲ್ಲರಿಗೂ ಆದರ್ಶವಾಗಿವೆ. ಜವಾಬ್ದಾರಿ, ಪ್ರಾಮಾಣಿಕತೆ ಮತ್ತು ಜನಸೇವೆಯಿಂದ ಉತ್ತಮ ನಾಯಕತ್ವ ರೂಪುಗೊಳ್ಳುತ್ತದೆ ಎಂದರು.
ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್ ಅಂಡ್ ಟೆಕ್ನಾಲಜಿಯ ವಿದ್ಯಾರ್ಥಿನಿ ಮೇಘಾ ಕೊಲ್ಕಾರ್ ಅವರು ಗಾಂಧೀಜಿಯವರ ಜೀವನ, ಸತ್ಯ ಹಾಗೂ ಅಹಿಂಸೆಯ ತತ್ವಗಳ ಕುರಿತು ಮಾತನಾಡಿದರು. ಸ್ಕೂಲ್ ಆಫ್ ಲಾ ವಿದ್ಯಾರ್ಥಿ ಉತ್ತಮ ಕಾಂಬಳೆ ಅವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಹಾಗೂ ನಾಯಕತ್ವದ ಗುಣಗಳನ್ನು ಸ್ಮರಿಸಿದರು.
ಕುಲಸಚಿವ ಡಾ. ಆರ್. ವಿ. ಕುಲಕರ್ಣಿ ಅವರು ಜಯಂತಿಯ ಶುಭಾಶಯಗಳನ್ನು ಕೋರಿ, ಇಬ್ಬರು ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ವಿಭಾಗದ ಡೀನ್ ಹಾಗೂ ಪ್ರಾಂಶುಪಾಲೆ ಡಾ. ತೇಜಸ್ವಿನಿ ವಲ್ಲಭ, ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ಉಪಪ್ರಾಂಶುಪಾಲ ಡಾ. ಆನಂದ ಪಿ. ಅಂಬಲಿ, ಉಪವೈದ್ಯಕೀಯ ಅಧೀಕ್ಷಕ ಡಾ. ರವಿಕುಮಾರ ಬಿರಾದಾರ, ಆರ್‌ & ಡಿ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಾ. ಆರ್. ಜಿ. ಕುಲಕರ್ಣಿ, ಉಪಕುಲಸಚಿವ ಸತೀಶ ಪಾಟೀಲ, ಹಣಕಾಸು ಅಧಿಕಾರಿ ಬಿ. ಎಸ್. ಪಾಟೀಲ, ಸಹಾಯಕ ಕುಲಸಚಿವ ಡಾ. ಶ್ರೀಧರ ಬಗಲಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this