ಸತ್ಸಂಗದತ್ತ ಯುವ ಜನತೆ ಮುಖ ಮಾಡಬೇಕು- ಶಂಕರ ಬೈಚಬಾಳ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 16:
ಸತ್ಸಂಗವು ನಮ್ಮಲ್ಲಿ ಸದಾಚಾರ , ಸದ್ಬುದ್ದಿ, ಆಚಾರ ವಿಚಾರಗಳನ್ನು ತಿಳಿಸುವ ಮೂಲಕ ಮಾನವೀಯ ಮೌಲ್ಯಗಳನ್ನು, ಪ್ರೀತಿ ಅಂತಕರಣವನ್ನು ಬೆಳೆಸುತ್ತದೆ. ಇವುಗಳಲ್ಲಿ ಪಾಲ್ಗೊಳ್ಳುವುದರಿಂದ ಇಂದಿನ ಹಲವು ಒತ್ತಡಗಳ ಬದುಕಿನಿಂದ ಮುಕ್ತವಾಗಿ
ಬದುಕಲು ಸಾಧ್ಯವಾಗುತ್ತದೆ. ಈ ಕಾರಣ ಸತ್ಸಂಗದತ್ತ ಯುವಜನತೆ ಮುಖ ಮಾಡಿ ಅದರಲ್ಲಿ ಪಾಲ್ಗೊಂಡು ಬದುಕನ್ನು ರೂಪಿಸಿಕೊಳ್ಳಬೇಕೆಂದು ಹಿರಿಯ ಸಾಹಿತಿ ಶಂಕರ ಬೈಚಬಾಳ ಇಂದಿಲ್ಲಿ ಕರೆ ನೀಡಿದರು.
ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ 552ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶರಣರ ಚಿಂತನೆಗಳನ್ನು ಅವಲೋಕನ ಮಾಡುತ್ತಾ ಅವರು ತಿಳಿಸಿದ ಆದರ್ಶಗಳನ್ನು ಮೈಗೂಢಿಸಿಕೊಳ್ಳಬೇಕು. 12ನೇ ಶತಮಾನದ ಶರಣರು ವಚನಗಳ ಮೂಲಕ ನಮಗೆ ಕಾಯಕ, ದಾಸೋಹ
ತತ್ವಗಳ ಜೊತೆಗೆ ಮಾನವ ಬದುಕಿಗೆ ಬೇಕಾದ ಶ್ರೇಷ್ಠ ಮೌಲ್ಯಗಳನ್ನು ತಿಳಿಸಿದ್ದಾರೆ. ಅವರು ಅನ್ಯಭಾಷಿಕರನ್ನು ಸೆಳೆಯುವ ಮೂಲಕ ಭಾಷಾ ಕ್ರಾಂತಿಯನ್ನು, ಜೊತೆಗೆ ಅನಕ್ಷರಸ್ಥರನ್ನು ಅಕ್ಷರ ಕಲಿಸುವ ಮೂಲಕ ಸಾಕ್ಷರಕ್ರಾಂತಿಯನ್ನು ಅಂದೆ ಮಾಡಿದ್ದುಂಟು . ಈ ಹಿನ್ನೆಲೆಯಾಗಿ ಶರಣರು ನಮಗೆ ಸದಾ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ . ಇಂದು ಜಾಗತಿಕವಾಗಿ ಶರಣರ ತತ್ವಗಳು ಪ್ರಸಾರಗೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಇವರ ಕುರಿತು ಜನಪದ ಸಾಹಿತ್ಯದಲ್ಲಿಯೂ ವಿಶೇಷವಾದ ನುಡಿಗಳಿವೆ. ಅವರು ಸಾರಿದ ಜೀವನ ಮೌಲ್ಯಗಳು ಬಿತ್ತರಗೊಂಡಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ದಿಮೆದಾರರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಡೋಣ ಬೂದಿಹಾಳದ ಎಂ .ಎಸ್ . ಬಿರಾದಾರ ಅವರು ವಹಿಸಿ ಮಾತನಾಡುತ್ತಾ ಇಂದು ಯುವಜನತೆ ಮೊಬೈಲ್ ದಾಸರಾಗುತ್ತಿದ್ದಾರೆ. ಅವರೆಲ್ಲ ಪುಸ್ತಕದ ದಾಸರಾಗಬೇಕು. ಅಂದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಇಂತಹ ಸತ್ಸಂಗಗಳು ನಮಗೆ ದಾರಿದೀಪವಾಗುತ್ತವೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಸಮಾಧಾನ, ಶಾಂತಿ ಸಿಗುತ್ತದೆ ಎಂದು ತಿಳಿಸಿದರು .
ಕಾರ್ಯಕ್ರಮದ ಭಕ್ತಿ ಸೇವೆಯನ್ನು ಐಶ್ವರ್ಯ ನಗರದ ಗಜಾನನ ಉತ್ಸವ ಮಂಡಳಿ ಅಧ್ಯಕ್ಷ ಹಾಗೂ ಹಣಕಾಸು ಉದ್ಯಮದ ಪ್ರಮುಖ ಅಶೋಕ ದೇಶಟ್ಟಿ ನಿರ್ವಹಿಸಿ ಮಾತನಾಡಿ, ದೇವರ ಸೇವೆ ಮಾಡುವುದು ನಮ್ಮ ಬದುಕಿನ ಸಮಾಧಾನಕ್ಕೆ. ಇದರಿಂದ ಸಂತೋಷವಾಗುತ್ತದೆ. ಅಲ್ಲದೆ ನೆಮ್ಮದಿಯು ದೊರೆಯುತ್ತದೆ .ನಮ್ಮ ಹಿರಿಯರು ಇಂತಹ ಮಾರ್ಗವನ್ನು ತಿಳಿಸಿದ್ದಾರೆ. ಮುಂದಿನ ಪೀಳಿಗೆ ಇದನ್ನು ಅರಿತು ನಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಎ. ಕೆ. ಹೊಸಟ್ಟಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿ ,ಪ್ರಸ್ತಾವಿಕವಾಗಿ ಮಾತನಾಡಿದರು .
ವಿಶ್ರಾಂತ ಪ್ರಾಚಾರ್ಯ ಎಂ .ಓ. ಶಿರೂರ ನಿರೂಪಿಸಿದರು .
ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ
ಮಾರುತಿ ದೇವಸ್ಥಾನದ ಅರ್ಚಕ ಮಲ್ಲಯ್ಯ ಸ್ವಾಮಿ ಹಿರೇಮಠ, ಮಾರುತಿ ಸೇವಾ ಸಮಿತಿ ಅಧ್ಯಕ್ಷ ಬಿ .ಎನ್. ಬಿರಾದಾರ, ಎಸ್.ಕೆ. ಬಿರಾದಾರ, ಎಮ್. ಕೆ. ಬಿಸನಾಳ, ಚಂದ್ರಶೇಖರ ಸರಸಂಬಿ, ವಿಶ್ರಾಂತ ವೈದ್ಯಾಧಿಕಾರಿ ಬಿ.ಎಸ್. ಪಾಟೀಲ,ಎಸ್. ಎಸ್. ತೊದಲವಾಗಿ, ಕ್ಯಾಪ್ಟನ್ ನಾರಾಯಣ, ವೀರಣ್ಣ ಹುಲಸೂರ, ಗಿರೀಶ್ ಅನಂತಪುರ, ಅಮರನಾಥ್ ಬಿರಾದಾರ, ನಾನಾಗೌಡ ಪಾಟೀಲ, ಬಿ.ವಿ . ಪಾಟೀಲ, ಜಿ.ಬಿ. ಪಟ್ಟಣದ, ಬಸವರಾಜ ಕಣಬೂರ, ವಿಶ್ರಾಂತ ಪೊಲೀಸ ಅಧಿಕಾರಿ ಪಟ್ಟಣಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Share this